ಟ್ರಾನ್ಸಫರ್ ಮಾಡ್ಕೊಂಡೋಗಿ ಅಂದ ರಾಜಕಾರಣಿಗೆ ಟಾಂಗ್ ನೀಡಿದ ಶಾಲಾ ಶಿಕ್ಷಕ!
ಕಲಬುರಗಿ : ಅಫಜಲಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಂ.ವೈ.ಪಾಟೀಲ್ ಅವರ ಪುತ್ರ, ಜಿಲ್ಲಾ ಪಂಚಾಯತಿ ಸದಸ್ಯ ಅರುಣ್ ಪಾಟೀಲ್ ಅಫಜಲಪುರ ನಿವಾಸಿಯಾದ ಶಾಲಾ ಶಿಕ್ಷಕ ಜಗದೀಶ್ ಆವಟಿ ಎಂಬುವರಿಗೆ ಫೋನ್ ಕರೆ ಮಾಡಿ ವರ್ಗಾವಣೆ ಮಾಡಿಸಿಕೊಂಡು ಹೋಗಿ ಎಂದಿರುವ ಆಡಿಯೋ ವೈರಲ್ ಆಗಿದೆ. ಈ ಮೊದಲಿದ್ದ ಕಲಬುರಗಿಗೆ ವರ್ಗಾವಣೆ ಮಾಡಿಸಿಕೊಳ್ಳಿ. ಆರಾಮಾಗಿ ಮಾಲೀಕಯ್ಯ ತೊಡೆ ಮೇಲೆ ಗಣಪತಿಯಂತೆ ಕುಳಿತು ರಾಜಕೀಯ ಮಾಡಿಕೊಂಡಿರಿ. ಇಲ್ಲವೇ ನಿಮಗೆ ದಕ್ಕೆಯಾದಲ್ಲಿ ನನ್ನ ಮೇಲೆ ಬ್ಲೇಮ್ ಮಾಡುವುದು ಬೇಡ. ಚುನಾವಣೆ ಸಂದರ್ಭದಲ್ಲಿ ಏನು ಕೆಲಸ ಮಾಡಿದ್ದೀರಿ, ಫೇಸ್ ಬುಕ್ ನಲ್ಲಿ ಏನೆಲ್ಲಾ ಕಾಮೆಂಟ್ ಮಾಡಿದ್ದಿರಿ, ಎಷ್ಟು ಹುಷಾರಿದಿ ಎಲ್ಲವೂ ನನಗೆ ಗೊತ್ತಿದೆ ಎಂದು ಹೇಳಿದ್ದಾರೆ.
ಆದರೆ, ಶಿಕ್ಷಕ ಜಗದೀಶ್ ಆವಟಿ, ಪಾಟೀಲರ ಆವಾಜ್ ಗೆ ಪ್ರತ್ಯುತ್ತರ ನೀಡಿದ್ದು ಹತ್ಯೆಯಂತೂ ಮಾಡುವುದಿಲ್ಲವಲ್ಲ. ಮಾಸ್ತರ ನೌಕರಿ ಏನು ಲಂಚ ತಿನ್ನುವ ನೌಕರಿ ಅಲ್ಲ. ನನ್ನ ಹೆಣವೇ ಹೋದರೂ, ಅಫಜಲಪುರ ಬಿಟ್ಟು ಹೋಗುವುದಿಲ್ಲ. ಶಿಕ್ಷಕ ವೃತ್ತಿಯೇ ಬಿಟ್ಟು ಮತ್ತೊಂದು ನೌಕರಿ ಪಡೆದು ಬರುತ್ತೇನೆ. ಏಳು ಎಕರೆ ಜಮೀನಿದೆ ಆರಾಮಾಗಿ ತರಕಾರಿ ಮಾರಿಕೊಂಡು ಬದುಕುತ್ತೇನೆ ಎಂದು ಹೇಳಿದ್ದಾನೆ. ಆಗ ಅಷ್ಟೊಂದು ಸಂಕಲ್ಪ ಮಾಡಿದ್ದರೆ ಆಯಿತು ಎಂದು ಅರುಣ್ ಪಾಟೀಲ್ ಹೇಳಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಅರುಣ್ ಪಾಟೀಲ್ ಮತ್ತು ಶಿಕ್ಷಕ ಜಗದೀಶ್ ಏನು ಹೇಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.