ಸಿಎಂ ಸಿದ್ಧರಾಮಯ್ಯ ಭಂಟ ಸಚಿವ ಹೆಚ್.ಆಂಜನೇಯ ಹಣಿಯಲು ಬಿಜೆಪಿ ಚಾಣಕ್ಯ ಅಮಿತ್ ಶಾ ಸ್ಕೆಚ್!
ಬೆಂಗಳೂರು: ಗುಜರಾತ್ ಮತ್ತು ಹಿಮಾಚಲ ಪ್ರದೇಶ ಗೆದ್ದ ಬಳಿಕ ಬಿಜೆಪಿ ಚಾಣಕ್ಯ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಅವರ ಕಣ್ಣು ಕರ್ನಾಟಕದ ಮೇಲೆ ನೆಟ್ಟಿದೆ. ಶತಾಯಗತಾಯ ಕರ್ನಾಟಕವನ್ನು ವಶ ಪಡಿಸಿಕೊಳ್ಳಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಈಗಾಗಲೇ ಕರ್ನಾಟಕಕ್ಕೆ ಲಗ್ಗೆ ಇಟ್ಟಿರುವ ಬಿಜೆಪಿ ಅದ್ಯಕ್ಷ ಅಮಿತ್ ಶಾ ತಮ್ಮದೇ ಆದ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ.
ಈ ಮೊದಲು ಜನೇವರಿ 10ಕ್ಕೆ ಚಿತ್ರದುರ್ಗ ನಗರದಲ್ಲಿ ಬಿಜೆಪಿ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಿತ್ತು. ಸಮಾವೇಶದಲ್ಲಿ ಬಿಜೆಪಿ ಚಾಣಕ್ಯ ಅಮಿತ್ ಶಾ ಮೂರು ತಾಸುಗಳ ಕಾಲ ಪಾಲ್ಗೊಳ್ಳುವುದಾಗಿ ನಿರ್ಧರಿಸಲಾಗಿತ್ತು. ಆದರೆ, ಮೊನ್ನೆ ಅಮಿತ್ ಶಾ ಬೆಂಗಳೂರಿಗೆ ಬಂದು ಹೋದ ಬಳಿಕ ಬಿಜೆಪಿ ಪ್ಲಾನ್ ಬದಲಾಗಿದೆ. ಚಿತ್ರದುರ್ಗದ ಬದಲು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ಅಮಿತ್ ಶಾ ನೇತೃತ್ವದಲ್ಲಿ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಅವರ ತವರು ಕ್ಷೇತ್ರದಲ್ಲಿ ಬಿಜೆಪಿ ಚಾಣಕ್ಯ ಅಮಿತ್ ಶಾ ನೇತೃತ್ವದಲ್ಲಿ ಸಮಾವೇಶ ನಡೆಸುವುದು. ಆ ಮೂಲಕ ಸಿಎಂ ಸಿದ್ಧರಾಮಯ್ಯ ಅವರ ಭಂಟ ಹೆಚ್.ಆಂಜನೇಯಗೆ ಟಾಂಗ್ ಕೊಡುವುದು ಬಿಜೆಪಿ ರಣತಂತ್ರವಾಗಿದೆ. ಇತ್ತೀಚೆಗಷ್ಟೇ ಹೊಳಲ್ಕೆರೆಯಲ್ಲಿ ನಡೆದ ಸಾಧನಾ ಸಂಭ್ರಮದಲ್ಲಿ ಸಿಎಂ ಸಿದ್ಧರಾಮಯ್ಯ ಭಾಗಿಯಾಗಿದ್ದರು. ಸಚಿವ ಹೆಚ್.ಆಂಜನೇಯ ಅವರ ಗುಣಗಾನ ಮಾಡಿ ಮತ್ತೊಮ್ಮೆ ಗೆಲ್ಲಿಸುವಂತೆ ಜನರಲ್ಲಿ ಮನವಿ ಮಾಡಿದ್ದರು.
ಈ ಹಿಂದೆ ಬಿಜೆಪಿಯ ಕಮಲ ಅರಳಿದ್ದ ಹೊಳಲ್ಕೆರೆಯಲ್ಲಿ ಕಳೆದ ಚುನಾವಣೆಯಲ್ಲಿ ಹೆಚ್.ಆಂಜನೇಯ ಗೆಲುವು ಸಾಧಿಸಿದ್ದರು. ಮಂತ್ರಿಯಾಗಿ ಸದಾ ಸಿದ್ಧರಾಮಯ್ಯ ಬೆನ್ನಿಗೆ ನಿಂತಿರುವ ಹೆಚ್.ಆಂಜನೇಯ ಬಿಜೆಪಿ ವಿರುದ್ಧ ಕಿಡಿಕಾರುತ್ತಲೇ ಬಂದಿದ್ದರು. ಹೀಗಾಗಿ, ಹೊಳಲ್ಕೆರೆಯಲ್ಲಿ ಬಿಜೆಪಿ ಹವಾ ಎಬ್ಬಿಸುವ ಮೂಲಕ ಹೆಚ್.ಆಂಜನೇಯ ಅವರನ್ನು ಕಟ್ಟಿ ಹಾಕುವುದು. ಸಿಎಂ ಸಿದ್ಧರಾಮಯ್ಯ ಅವರ ರೆಕ್ಕೆಪುಕ್ಕಗಳನ್ನು ಒಂದೊಂದಾಗಿ ಕಟ್ ಮಾಡುವುದು ಚಾಣಕ್ಯ ತಂತ್ರ ಎನ್ನಲಾಗುತ್ತಿದೆ. ಬಿಜೆಪಿ ಚಾಣಕ್ಯನ ತಂತ್ರಗಾರಿಕೆ ಅದೆಷ್ಟರ ಮಟ್ಟಿಗೆ ಕ್ಲಿಕ್ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ.