ಪ್ರಮುಖ ಸುದ್ದಿ
ಅಮಿತ್ ಶಾ ಭೇಟಿಗೆ ಹೋಗ್ತಾರಂತೆ ಅನರ್ಹ ಶಾಸಕರು!
ಬೆಂಗಳೂರು : ದೋಸ್ತಿ ಸರ್ಕಾರದ ವಿರುದ್ಧ ಬಂಡಾಯವೆದ್ದು ಅನರ್ಹಗೊಂಡಿರುವ ಶಾಸಕರು ಈಗ ಅತಂತ್ರವಾಗಿದ್ದಾರೆ. ಅತ್ತ ಮಾತೃ ಪಕ್ಷವೂ ಇಲ್ಲ ಇತ್ತ ಬಿಜೆಪಿ ನೇತೃತ್ವದ ಸರ್ಕಾರ ಸೇರುವಂತೆಯೂ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಇಂದು ಅನರ್ಹ ಶಾಸಕರು ದೆಹಲಿಗೆ ತೆರಳಿ ಕೇಂದ್ರ ಗೃಹ ಸಚಿವ, ಬಿಜೆಪಿ ಅದ್ಯಕ್ಷ ಅಮಿತ್ ಶಾ ಭೇಟಿಗೆ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆದರೆ, ಅನರ್ಹ ಶಾಸಕರಿಗೆ ಅಮಿತ್ ಶಾ ಭೇಟಿ ಭಾಗ್ಯ ಸಿಗಲಿದೆಯೇ ಎಂಬುದೇ ಯಕ್ಷ ಪ್ರಶ್ನೆ ಆಗಿದೆ.
ಯಡಿಯೂರಪ್ಪ ಸಚಿವ ಸಂಪುಟ ರಚನೆ ಬಳಿಕ ಅನರ್ಹ ಶಾಸಕರು ಮತ್ತಷ್ಟು ಗೊಂದಲದಲ್ಲಿ ಮುಳುಗಿದ್ದಾರೆ. ಅನರ್ಹತೆ ಪ್ರಶ್ನಿಸಿ ಸುಪ್ರೀಕೋರ್ಟ್ ನಲ್ಲಿ ಸಲ್ಲಿರುವ ಅರ್ಜಿ ವಿಚಾರಣೆ ಮತ್ತಷ್ಟು ವಿಳಂಬವಾದರೆ ಮುಂದಿಡಬೇಕಾದ ಹೆಜ್ಜೆ ಯಾವುದು ಎಂಬ ನಿರ್ಧಾರ ಕೈಗೊಳ್ಳದೆ ಚಿಂತೆಗೀಡಾಗಿದ್ದಾರೆ ಎನ್ನಲಾಗಿದೆ. ಹೀಗಾಗಿ, ಇಂದು ಅಮಿತ್ ಶಾ ಭೇಟಿ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳುವ ನಿಟ್ಟಿನಲ್ಲಿ ಅತೃಪ್ತ ಶಾಸಕರು ದೆಹಲಿಗೆ ಹೊರಟಿದ್ದಾರೆ ಎಂದು ತಿಳಿದು ಬಂದಿದೆ.