2019ರ ಲೋಕಸಭೆ ಚುನಾವಣೆ ಗೆಲ್ಲಲು ಬಿಜೆಪಿ ಚಾಣಕ್ಯ ಅಮಿತ್ ಶಾ ಮಾಸ್ಟರ್ ಪ್ಲಾನ್!
ದೆಹಲಿ: ಎನ್ ಡಿಎ ಮೈತ್ರಿಕೂಟದಿಂದ ಒಂದೊಂದೇ ಮಿತ್ರ ಪಕ್ಷಗಳು ಹೊರ ನಡೆಯುತ್ತಿವೆ. ಮತ್ತೊಂದು ಕಡೆ ತೃತೀಯ ರಂಗ ಬಲಿಷ್ಠಗೊಳ್ಳುತ್ತಿದೆ. ಅಲ್ಲದೆ ಉಪ ಚುನಾವಣೆಗಳಲ್ಲಿ ಬಿಜೆಪಿ ಸೋಲಿನ ರುಚಿ ಉಂಡಿದೆ. ಪರಿಣಾಮ 2019ರ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಎನ್ ಡಿಎ ಮೈತ್ರಿಕೂಟದಲ್ಲಿರುವ ಮಿತ್ರ ಪಕ್ಷಗಳನ್ನು ಗಟ್ಟಿ ಮಾಡಿಕೊಳ್ಳಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.
ನರೇಂದ್ರ ಮೋದಿ ಸರಕಾರದ ವಿರುದ್ಧ ಕಿಡಿ ಕಾರುತ್ತಿರುವ ಮಹಾರಾಷ್ಟ್ರದ ಶಿವಸೇನೆ ಪಕ್ಷದ ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಲು ಅಮಿತ್ ಶಾ ನಿರ್ಧರಿಸಿದ್ದಾರೆ. ನಾಳೆ ಬುಧವಾರ ಮುಂಬೈನಲ್ಲಿ ಅವರು ಠಾಕ್ರೆಯನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಆ ಮೂಲಕ ಭಿನ್ನಾಭಿಪ್ರಾಯ ಶಮನಗೊಳಿಸಿ ಮಿತೃತ್ವ ಗಟ್ಟಿಗೊಳಿಸುವ ಪ್ರಯತ್ನವನ್ನು ಅಮಿತ್ ಶಾ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ಜೂನ್ 7ರಂದು ಪಾಟ್ನಾದಲ್ಲಿ ಎನ್ ಡಿ ಮಿತ್ರ ಪಕ್ಷಗಳ ನಾಯಕರ ಜೊತೆ ಮಹಾಭೋಜನ ಆಯೋಜಿಸಲಾಗಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಕೇಂದ್ರ ಸಚಿವ ಪಾಸ್ವಾನ್ ಎನ್ ಡಿಎನ ಎಲ್ಲಾ ಸಂಸದರನ್ನೂ ಮಹಾಭೋಜನಕ್ಕೆ ಆಹ್ವಾನ ನೀಡಲಾಗಿದೆ ಎನ್ನಲಾಗಿದೆ. ಆ ಮೂಲಕ ಬಿಜೆಪಿ ಚಾಣಕ್ಯ ಅಮಿತ್ ಶಾ 2019ರ ಚುನಾವಣೆಗೆ ಭರದ ತಯ್ಯಾರಿ ಆರಂಭಿಸಿದ್ದಾರೆ.