ಗುಜರಾತ್ & ಹಿಮಾಚಲ ಪ್ರದೇಶದ ವಿಜಯೋತ್ಸವ ವೇಳೆ ಅಮಿತ್ ಶಾ ಕರ್ನಾಟಕದತ್ತ ಬೆರಳು ಮಾಡಿದ್ದೇಕೆ?
ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿಕಾಸ ಯಾತ್ರೆ ಎರಡು ಹೆಜ್ಜೆ ಮುಂದೆ ಸಾಗಿದೆ. ಹಿಮಾಚಲ ಪ್ರದೇಶ ಮತ್ತು ಗುಜರಾತಿನ ಜನರಿಗೆ ಅಭಿನಂದನೆಗಳು. ಗುಜರಾತಿನ ಜನ ಅಭಿವೃದ್ಧಿ ಪರ ಸರ್ಕಾರಕ್ಕೆ ಮತ್ತೆ ಅಧಿಕಾರ ನೀಡಿದೆ. ಹಿಮಾಚಲ ಪ್ರದೇಶದಲ್ಲಿ ಭ್ರಷ್ಟ ಸರ್ಕಾರದ ವಿರುದ್ಧ ಜನ ತೀರ್ಪು ನೀಡಿದ್ದಾರೆ. ನಮ್ಮ ದೃಷ್ಟಿ ಈಗ ಕರ್ನಾಟಕದ ಮೇಲಿದೆ. ಕರ್ನಾಟಕದಲ್ಲೂ ಈ ವಿಜಯ ಯಾತ್ರೆ ಸಾಗಬೇಕಿದೆ. ಅಲ್ಲಿನ ಭ್ರಷ್ಟ ಸರ್ಕಾರವನ್ನು ಕಿತ್ತೊಗೆದು ಕರ್ನಾಟಕದಲ್ಲೂ ಬಿಜೆಪಿಯ ವಿಜಯ ಯಾತ್ರೆ ಸಾಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅದ್ಯಕ್ಷ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದರು.
ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಎರಡು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ವಿಜಯೋತ್ಸವ ಆಚರಿಸಲಾಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಬಿಜೆಪಿಯ ಗಣ್ಯರು ಉಪಸ್ಥಿತರಿದ್ದರು. ಸಾವಿರಾರು ಜನ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವದಲ್ಲಿ ಭಾಗಿಯಾಗಿದ್ದರು.
ಈ ವೇಳೆ ಅಮಿತ್ ಶಾ ಭಾಷಣಕ್ಕೆ ನಿಂತಾಗ ಕಾರ್ಯಕರ್ತರು ಮೋದಿ ಮೋದಿ ಎಂಬ ಘೋಷಣೆ ಕೂಗಿದರು. ಮೊದಲು ಪ್ರಧಾನಿ ಮೋದಿ ಮಾತನಾಡಲಿ ಎಂಬ ಸಂದೇಶ ನೀಡಿದರು. ಆಗ ಐದು ನಿಮಿಷ ನನ್ನ ಮಾತು ಕೇಳಿಸಿಕೊಳ್ಳಿ. ಬಳಿಕ ಲೋಕಪ್ರಿಯ ಪ್ರಧಾನಿ ಮೋದಿ ಮಾತನಾಡಲಿದ್ದಾರೆ ಎಂದು ಅಮಿತ್ ಶಾ ಹೇಳಿದ್ದು ಮೋದಿ ಜನಪ್ರಿಯತೆಗೆ ಹಿಡಿದ ಕೈಗನ್ನಡಿ ಆಗಿತ್ತು. ಇನ್ನು ಮೋದಿ, ಅಮಿತ್ ಶಾ ಜೋಡಿಯ ಭಾಷಣ ಕೇಳಿದರೆ ನೆಕ್ಸ್ಟ್ ಕರ್ನಾಟಕದತ್ತ ದೃಷ್ಟಿ ನೆಟ್ಟಿದ್ದು ಗುಜರಾತ್ – ಹಿಮಾಚಲ ಪ್ರದೇಶದ ವಿಜಯೋತ್ಸವದ ಸಭೆಯಲ್ಲಿ ಸ್ಪಷ್ಟವಾಗಿ ಕಂಡು ಬಂದಿತು.