ಆನಂದ ಬರೆದ ಡೈರಿಯಲ್ಲಿದೆ ಮೆಡಿಕಲ್ ಸೀಟ್ ವ್ಯವಹಾರದ ಗುಟ್ಟು.?
ಯಾರೀತ ಆನಂದ ಈತನ ಮೇಲೇಕೆ ಐಟಿ ಕಣ್ಣು.?
ವಿವಿ ಡೆಸ್ಕ್ಃ ಪರಮೇಶ್ವರ ಮನೆ, ಕಚೇರಿ ಮತ್ತು ಶಿಕ್ಷಣ ಸಂಸ್ಥೆಗಳ ಮೇಲೆ ನಡೆದ ಐಟಿ ಪರಿಶೀಲನೆ ಮುಂದುವರೆದಿದೆ. ಸಿದ್ಧಾರ್ಥ ಮೆಡಿಕಲ್ ಕಾಲೇಜಿಗೆ ಸಂಬಂಧಿಸಿದಂತೆ ಸೀಟ್ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ವ್ಯವಹಾರಕ್ಕೆ ಸಂಬಂಧಿಸಿದಂತೆ ಆನಂದ ಎಂಬುವವರು ಡೈರಿಯೊಂದರಲ್ಲಿ ಬರೆದಿಟ್ಟಿದ್ದಾರೆ ಎನ್ನಲಾದ ಮಹತ್ವದ ಮಾಹಿತಿಯನ್ನು ಐಟಿ ಅಧಿಕಾರಿಗಳು ಕಲೆ ಹಾಕಿದ್ದಾರೆ ಎನ್ನಲಾಗಿದೆ.
ಆ ಕುರಿತು ವ್ಯವಹಾರದ ಗುಟ್ಟನ್ನು ಬಯಲು ಮಾಡಲು ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಯಾರೀತ ಆನಂದ.?
ಆನಂದ ಎನ್ನುವವರು ಸಿದ್ಧಾರ್ಥ ಮೆಡಿಕಲ್ ಕಾಲೇಜಿಗೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದ ಎನ್ನಲಾಗಿದೆ. ಮೆಡಿಕಲ್ ಸೀಟ್ ಹಂಚಿಕೆ ವೇಳೆ ಹಣದ ವ್ಯವಹಾರವನ್ನು ಈತನೇ ನಿಭಾಯಿಸುತ್ತಿದ್ದ ಎಂಬ ಮಾಹಿತಿಯನ್ನು ಐಟಿ ಅಧಿಕಾರಿಗಳು ಹೊರಹಾಕಿದ್ದು, ವ್ಯವಹಾರಕ್ಕೆ ಸಂಬಂಧಿಸಿದಂತೆ ಡೈರಿಯೊಂದರಲ್ಲಿ ಬರೆದಿಟ್ಟಿದ್ದಾನೆ ಎಂಬ ಮಾಹಿತಿಯು ಇದೆ. ಹೀಗಾಗಿ ಅಧಿಕಾರಿಗಳು ಆ ಡೈರಿ ಹುಡುಕಾಟದಲ್ಲಿದ್ದಾರೆ ಎನ್ನಲಾಗಿದೆ.
ಸಿದ್ಧಾರ್ಥ ಮೆಡಿಕಲ್ ಕಾಲೇಜಿನ ಎಲ್ಲಾ ವ್ಯವಹಾರ ನಡೆಸುವ ಆನಂದ ಮಾಜಿ ಡಿಸಿಎಂ ಪರಮೇಶ್ವರರ ಅಣ್ಣನ ಮಗ ಎನ್ನಲಾಗಿದೆ. ಹೀಗಾಗಿ ಆತನನ್ನು ಐಟಿ ಅಧಿಕಾರಿಗಳು ವಿಚಾರಣೆ ನಡೆಸುವ ಸಾಧ್ಯತೆಯೂ ಇಲ್ಲಿ ಕೇಳಿ ಬರುತ್ತಿದೆ.
ಐಟಿ ಅಧಿಕಾರಿಗಳಿಗೆ ಇದ್ದ ಮಾಹಿತಿ ಪ್ರಕಾರ ಸೀಟ್ ಹಂಚಿಕೆ ಕುರಿತು ನಡೆಸಿದ ಹಣದ ವ್ಯವಹಾರ ಗುಟ್ಟನ್ನು ಬಯಲು ಮಾಡಲು ಅವರು, ಪ್ರಮುಖ ಗುರಿಯನ್ನು ಹೊಂದಿದ್ದಾರೆ ಎನ್ನಲಾಗಿದೆ. ಅಲ್ಲದೆ ನಿನ್ನೆ ಪರಿಶೀಲನೆ ಮಾಡುವಾಗ ದೊರೆತ ದಾಖಲೆಗಳ ಪ್ರಕಾರ ಶಿಕ್ಷಣ ಸಂಸ್ಥೆಗಳಲ್ಲಿ ಮೆಡಿಕಲ್ ಕಾಲೇಜು ಕುರಿತು ಸಮರ್ಪಕ ಮಾಹಿತ ಮೇರೆಗೆ ಅಧಿಕಾರಿಗಳು ಕಾರ್ಯಾಚಾರಣೆ ಮುಂದುವರೆಸಿದ್ದಾರೆ. ಅಗತ್ಯ ಬಿದ್ದಲ್ಲಿ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯನ್ನು ವಿಚಾರಣೆ ನಡೆಸಬಹುದು ಎನ್ನಲಾಗಿದೆ.
ನಿನ್ನೆ ತಡರಾತ್ರಿ ವರೆಗೆ ಸಾಕಷ್ಟು ದಾಖಲಾತಿಗಳನ್ನು ವಶಕ್ಕೆ ಪಡೆದುಕೊಂಡು ಐಟಿ ಅಧಿಕಾರಿಗಳು ಸಮರ್ಪಕ ಮಾಹಿತಿಯನ್ನು ಕಲೆ ಹಾಕಿದ್ದಾರೆ. ನೂರಾರು ಅಕೌಂಟ್ ಗಳ ಮಾಹಿತಿಯನ್ನು ಪಡೆದಿದ್ದು, ಇದೆಲ್ಲವನ್ನು ಪರಿಶೀಲಿಸಿ ತೆರಿಗೆ ವಂಚನೆಯಾಗಿರುವ ಕುರಿತು ಪತ್ತೆ ಹಚ್ಚಲಿದ್ದಾರೆ ಎಂಬ ಮಾಹಿತಿ ಇದೆ.
ಅಲ್ಲದೆ ಕಾರ್ಯಾಚರಣೆ ವೇಳೆ ಮಾಜಿ ಡಿಸಿಎಂ ಪರಮೇಶ್ವರರ ಸದಾಶಿವ ನಗರದ ಮನೆಯಲ್ಲಿ ನಗದು 70 ಲಕ್ಷ ರೂ. ದೊರೆತಿವೆ ಎನ್ನಲಾಗಿದೆ. ಆರ್.ಎಲ್.ಜಾಲಪ್ಪ ಮತ್ತು ಪರಮೇಶ್ವರರ ಮನೆ ದಾಳಿ ವೇಳೆ ಒಟ್ಟು 4.5 ಕೋಟಿ ನಗದು ಹಣ ದೊರೆತಿದೆ.