ವಿನಾಶಕಾಲೇ ವಿಪರೀತ ಬುದ್ಧಿ : ರಾಜ್ಯ ಸರ್ಕಾರದ ವಿರುದ್ಧ ಬಿಎಸ್ ವೈ ಕಿಡಿ
ಅನಂತಕುಮಾರ್, ಯಡಿಯೂರಪ್ಪ ವಿರುದ್ಧ FIRಗೆ ಮುಂದಾದ ರಾಜ್ಯ ಸರ್ಕಾರ?
ಬೆಂಗಳೂರು : ವಿನಾಶಕಾಲೇ ವಿಪರೀತ ಬುದ್ಧಿ ಎಂಬಂತೆ ರಾಜ್ಯ ಸರ್ಕಾರ ವರ್ತಿಸುತ್ತಿದೆ. ಭ್ರಷ್ಟಾಚಾರ ನಿಗ್ರಹ ದಳವನ್ನು ಸಂಪೂರ್ಣ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ವಿನಾಕಾರಣ ನನ್ನ ವಿರುದ್ಧ ದೂರು ದಾಖಲಿಸಲಾಗುತ್ತಿದೆ. ನನ್ನ ವಿರುದ್ಧ ಒಂದಲ್ಲಾ, ನೂರು FIR ಹಾಕಲಿ ಡೋಂಟ್ ಕೇರ್ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಿಎಂ , ಬಿಜೆಪಿ ರಾಜ್ಯದ್ಯಕ್ಷ ಬಿ.ಎಸ್. ಯಡಿಯೂರಪ್ಪ ಗುಡುಗಿದ್ದಾರೆ.
ಬಿಜೆಪಿ ಹೈಕಮಾಂಡ್ ಗೆ ಕಪ್ಪ ನೀಡಿರುವ ಬಗ್ಗೆ ಕೇಂದ್ರ ಸಚಿವ ಅನಂತಕುಮಾರ್ ಹಾಗೂ ಬಿಜೆಪಿ ರಾಜ್ಯದ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ವೇದಿಕೆಯೊಂದರಲ್ಲಿ ಮಾತಾನಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಅದರ ವಿಡಿಯೋ ಕೂಡ ಬಹಿರಂಗ ಆಗಿತ್ತು. ಇದೀಗ ವಿಡಿಯೋ ಮತ್ತು ಆಡಿಯೋ ಕುರಿತ ಎಫ್ ಎಸ್ ಎಲ್ ವರದಿ ಬಂದಿದ್ದು ಆಡಿಯೋ ಮತ್ತು ವಿಡಿಯೋ ಅಸಲಿ ಎನ್ನಲಾಗಿದೆ. ಎಫ್ ಎಸ್ ಎಲ್ ವರದಿ ಆಧರಿಸಿ ರಾಜ್ಯ ಸರ್ಕಾರ, ಕೇಂದ್ರ ಸಚಿವ ಅನಂತ ಕುಮಾರ್ ಮತ್ತು ಯಡಿಯೂರಪ್ಪ ವಿರುದ್ಧ FIR ದಾಖಲಿಸಿ ಭ್ರಷ್ಟಾಚಾರ ನಿಗ್ರಹ ದಳದ ಮೂಲಕ ತನಿಖೆ ನಡೆಸಲು ಮುಂದಾಗಿದೆ ಎನ್ನಲಾಗಿದೆ. ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಬಿಎಸ್ ವೈ ಗರಂ ಆಗಿದ್ದು , ರಾಜ್ಯ ಸರ್ಕಾರದ ವರ್ತನೆ ವಿನಾಶಕಾಲೇ ವಿಪರೀತ ಬುದ್ದಿ ಎಂಬಂತಾಗಿದೆ ಎಂದು ಕಿಡಿಕಾರಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ಕೆ.ಪಿ ನಂಜುಂಡಿ ಅವರ ನೇತೃತ್ವದಲ್ಲಿ ನಡೆದ ವಿಶ್ವಕರ್ಮ ಸಮುದಾಯದ ಸಮಾವೇಶದಲ್ಲಿ ಬಿಎಸ್ ವೈ ಭಾಗವಹಿಸಿದ್ದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.