ಆಂದೋಲಾಶ್ರೀ ಬಂಧನ ವೇಳೆ ಕಲ್ಲೆಸೆತ, 30ಕ್ಕೂ ಹೆಚ್ಚು ಜನರ ಬಂಧನ
ಜೇವರಗಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಜೇವರಗಿ: ಆಂದೋಲಾ ಗ್ರಾಮದ ಕರುಣೇಶ್ವರ ಮಠದ ಪೀಠಾಧಿಪತಿ ಹಾಗೂ ಶ್ರೀರಾಮಸೇನೆ ಕಾರ್ಯದ್ಯಕ್ಷ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಬಂಧನ ಖಂಡಿಸಿ ಹಿಂದೂಪರ ಸಂಘಟನೆಗಳು ಇಂದು ಜೇವರಗಿ ಬಂದ್ ಗೆ ಕರೆ ನೀಡಿವೆ. ನಿನ್ನೆ ಸಂಜೆ ಆಂದೋಲಾ ಸ್ವಾಮೀಜಿಯನ್ನು ಜೇವರಗಿ ಪೊಲೀಸರು ಬಂಧಿಸಿದ್ದರು. ಅಕ್ಟೋಬರ್ 14ರಂದು ಆಂದೋಲಾ ಗ್ರಾಮದಲ್ಲಿ ಅಂಗಡಿ ತೆರವುಗೊಳಿಸುವ ವಿಚಾರದಲ್ಲಿ ಗಲಾಟೆ ನಡೆದಿತ್ತು. ಗಲಾಟೆ ಸಂದರ್ಭದಲ್ಲಿ ನಸೀರುದ್ದೀನ್ ಗಾಯಗೊಂಡಿದ್ದರು. ಬಳಿಕ ಆಂದೋಲಾ ಶ್ರೀಗಳ ಕುಮ್ಮಕ್ಕಿನಿಂದಾಗಿಯೇ ನನ್ನ ಮೇಲೆ ಕೊಲೆ ಯತ್ನ ನಡೆದಿದೆ ಎಂದು ನಸೀರುದ್ದೀನ್ ದೂರು ನೀಡಿದ್ದರು. ಹೀಗಾಗಿ, ಜೇವರಗಿ ಪೊಲೀಸರು ನಿನ್ನೆ ಆಂದೋಲಾಶ್ರೀಗಳನ್ನು ಬಂಧಿಸಿ 14ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಆಂದೋಲಾಶ್ರೀಗಳ ಬಂಧನದ ವೇಳೆ ಮಠದ ಭಕ್ತರು ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರು ಭಾರೀ ವಿರೋಧ ವ್ಯಕ್ತಪಡಿಸಿದ್ದರು. ವಿನಾಕಾರಣ ಆಂದೋಲಾ ಶ್ರೀಗಳನ್ನು ಕೊಲೆಯತ್ನ ಪ್ರಕರಣದಲ್ಲಿ ಸಿಲುಕಿಸುವ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದ್ದರು. ಆಂದೋಲಾದ ಕರುಣೇಶ್ವರ ಮಠದ ಮುಂದೆ ಬೃಹತ್ ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲಿಸರು ಲಘುಲಾಠಿ ಪ್ರಯಾರ ಮಾಡಿದ್ದರು. ಪೊಲೀಸರ ಲಾಠಿ ಏಟು ತಿಂದು ಮತ್ತಷ್ಟು ಆಕ್ರೋಶಗೊಂಡ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಪರಿಣಾಮ ಇಬ್ಬರು ಪೊಲೀಸ್ ಪೇದೆಗಳು ಗಾಯಗೊಂಡಿದ್ದಾರೆ. ಅಲ್ಲದೆ ಕೆಲವು ಪ್ರತಿಭಟನಾಕಾರರೂ ಗಾಯಗೊಂಡಿದ್ದಾರೆ. ಕಲ್ಲುತೂರಾಟ ಪ್ರಕರಣಕ್ಕೆ ಸಂಭಂಧಿಸಿದಂತೆ ಪೊಲೀಸರು 30ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಆಂದೋಲಾ , ಕೆಲ್ಲೂರು ಗ್ರಾಮಗಳು ಹಾಗೂ ಜೇವರಗಿ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 500ಕ್ಕೂ ಹೆಚ್ಚು ಪೊಲೀಸರು, 9ಡಿಆರ್ ತುಕಡಿ, 2ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದೆ.
ಕಠೋರ ಹಿಂದುತ್ವವಾದಿ ಆಗಿರುವ ಆಂದೋಲದ ಕರುಣೇಶ್ವರ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಅವರನ್ನು ಕೇಸಿನಲ್ಲಿ ಸಿಲುಕಿಸುವ ಷಡ್ಯಂತ್ರವನ್ನು ಕಾಂಗ್ರೆಸ್ ನಾಯಕರು ಮಾಡಿದ್ದಾರೆ. ಆ ಮೂಲಕ ಈ ಭಾಗದ ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿಯನ್ನು ಮಟ್ಟ ಹಾಕುವ ಕುತಂತ್ರ ಆಂದೋಲಾ ಸ್ವಾಮೀಜಿ ಬಂಧನ ಹಿಂದೆ ಕೆಲಸ ಮಾಡಿದೆ ಎಂದು ಹಿಂದೂಪರ ಸಂಘಟನೆ ಮುಖಂಡರು ಆರೋಪಿಸಿದ್ದಾರೆ. ಅಲ್ಲದೆ ಪೊಲೀಸ್ ದೌರ್ಜನ್ಯ ಹಾಗೂ ಆಂದೋಲಾ ಶ್ರೀಗಳ ಬಂಧನ ಖಂಡಿಸಿ ಶ್ರೀರಾಮಸೇನೆ ಇಂದು ಜೇವರಗಿಯಲ್ಲಿ ಪ್ರತಿಭಟನೆ, ಬಂದ್ ನಡೆಸುವ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸರ ಸರ್ಪಗಾವಲು ಹಾಕಲಾಗಿದೆ.
ಎಸ್ಪಿ ಶಶಿಕುಮಾರ್ ಅಮಾನತ್ತುಗೊಳಿಸಿ : ಪ್ರಮೋದ್ ಮುತಾಲಿಕ್
ಅಂಗಡಿ ತೆರವು ವಿಚಾರದಲ್ಲಿ ಎರಡು ಕೋಮಿನ ಜನರ ಮದ್ಯೆ ಘರ್ಷಣೆ ನಡೆದಿದೆ. ಆದರೆ, ಆಂದೋಲಾ ಶ್ರೀಗಳನ್ನು ವಿನಾಕಾರಣ ಆ ಪ್ರಕರಣದಲ್ಲಿ ಎಳೆದು ತರಲಾಗಿದೆ. ಅಲ್ಲದೆ ಕೊಲೆ ಯತ್ನ ಕೇಸಿನಲ್ಲಿ ಸಿಲುಕಿಸಲಾಗಿದೆ. ಇದು ಹಿಂದೂ ವಿರೋಧಿ ಆಡಳಿತದ ವ್ಯವಸ್ಥಿತ ಷಡ್ಯಂತ್ರವಾಗಿದೆ. ಆಂದೋಲಾಶ್ರೀಗಳು ಪ್ರಭಾವಿ ಹಿಂದೂ ಸನ್ಯಾಸಿ ಆಗಿದ್ದು ದೊಡ್ಡ ಪ್ರಮಾಣದ ಅಭಿಮಾನಿ ಬಳಗ ಹೊಂದಿದ್ದಾರೆ. ಹಿಂದೂ ಸಮಾಜ ಅವರಿಗೆ ಹೆಚ್ಚಿನ ಗೌರವ ನೀಡುತ್ತದೆ.
ಹಿಂದೂ ವಿರೋಧಿಗಳು ಕೆಲ ಮುಸ್ಲಿಂ ಸಂಘಟನೆಗಳನ್ನು ಆಂಧೋಲಾ ಸ್ವಾಮೀಜಿ ವಿರುದ್ಧ ಎತ್ತಿಕಟ್ಟುವ ಮೂಲಕ ಸುಳ್ಳುಕೇಸಿನಲ್ಲಿ ಸಿಲುಕಿಸಿದ್ದಾರೆ. ಆಂಧೋಲಾಶ್ರೀ ಬಂಧನ ವೇಳೆಯೂ ಲಾಠಿ ಪ್ರಹಾರ, ಗದ್ದಲ ಗಲಾಟೆ ನಡೆದಿವೆ ಅದಕ್ಕೆಲ್ಲಾ ಎಸ್ಪಿ ಶಶಿಕುಮಾರ್ ಅವರೇ ಹೊಣೆ ಆಗುತ್ತಾರೆ. ಈಗಾಗಲೇ ನಾನು ಅವರ ಜೊತೆಗೆ ಮಾತನಾಡಿದ್ದೆ. ಆದರೂ ಅವರು ನ್ಯಾಯಯುತವಾದ ಕ್ರಮ ಕೈಗೊಂಡಿಲ್ಲ.
ಯಾರದೋ ಒತ್ತಡಕ್ಕೆ ಮಣಿದು ಆಂದೋಲಾಶ್ರೀಗಳ ವಿರುದ್ಧದ ಷಡ್ಯಂತ್ರದಲ್ಲಿ ಭಾಗಿಯಾಗಿದ್ದಾರೆ. ಎಸ್ಪಿ ಶಶಿಕುಮಾರ್ ಅಮಾನತ್ತು ಮಾಡಬೇಕೆಂದು ಸರ್ಕಾರವನ್ನು ಆಗ್ರಹಿಸುತ್ತೇವೆ ಎಂದು ವಿನಯವಾಣಿ ಗೆ ಶ್ರೀರಾಮ ಸೇನೆ ಸಂಸ್ಥಾಪಕ ಅದ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದರು.