ಜೇವರಗಿ ವಿಧಾನಸಭಾ ಕ್ಷೇತ್ರದಿಂದ ಆಂದೋಲಾಶ್ರೀ ಸ್ಪರ್ದೆ?
-ಮಲ್ಲಿಕಾರ್ಜುನ್ ಮುದನೂರ್
ಕಾವಿಧಾರಿ ಯೋಗಿ ಆದಿತ್ಯನಾಥ ಉತ್ತರ ಪ್ರದೇಶದ ಮುಖ್ಯಮಂತ್ರಿ ಪಟ್ಟಕ್ಕೆ ಏರುತ್ತಿದ್ದಂತೆ ದೇಶದೆಲ್ಲೆಡೆ ಕಾವಿಯೊಳಗಿನ ಖಾದಿಯೂ ಖಡಕ್ ಆಗಿದೆ. ಪರಿಣಾಮ ಕರ್ನಾಟಕದಲ್ಲೂ ಕೆಲ ಕಾವಿಧಾರಿಗಳು ರಾಜಕೀಯ ಕ್ಷೇತ್ರಕ್ಕೆ ಇಳಿಯಲು ಸನ್ನದ್ಧರಾಗಿದ್ದಾರೆ. ಈಗಾಗಲೇ ಈ ಬಗ್ಗೆ ಕೆಲವರು ಬಹಿರಂಗವಾಗಿ ಹೇಳಿಕೊಂಡಿದ್ದರೆ ಇನ್ನೂ ಕೆಲವರು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಈ ಮೊದಲು ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಬ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆಂಬ ಸುದ್ದಿ ಹಬ್ಬಿತ್ತು. ಇದೀಗ ಕಲಬುರಗಿ ಜಿಲ್ಲೆಯ ಜೇವರಗಿ ತಾಲೂಕಿನ ಆಂದೋಲಾ ಗ್ರಾಮದ ಕರುಣೇಶ್ವರ ಮಠದ ಸಿದ್ಧಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿಗಳ ಸರದಿ.
2018ರ ವಿಧಾನ ಸಭೆ ಚುನಾವಣೆಗೆ ಜೇವರಗಿ ಮತಕ್ಷೇತ್ರದಿಂದ ಆಂದೋಲಾಶ್ರೀಗಳು ಕಣಕ್ಕಿಳಿಯಲಿದ್ದಾರಂತೆ ಎಂಬ ಸುದ್ದಿ ಈಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಶ್ರೀರಾಮಸೇನೆಯ ಕಾರ್ಯದ್ಯಕ್ಷರೂ ಆಗಿರುವ ಆಂದೋಲಾಶ್ರೀ ಕಟ್ಟರ್ ಹಿಂದುತ್ವವಾದಿಯಾಗಿದ್ದಾರೆ. ಕಠೋರ ಮಾತುಗಳ ಮೂಲಕ ಹಿಂದು ಜಾಗೃತಿ ಮೂಡಿಸುವಲ್ಲಿ ತೊಡಗಿಸಿಕೊಂಡಿರುವ ಆಂದೋಲಶ್ರೀಗಳು ಹಿಂದೂ ಸಂಘಟನೆಗಳ ಯುವಕರಿಗೆ ಅಚ್ಚುಮೆಚ್ಚು. ಹೀಗಾಗಿ, ಆಂದೋಲಾಶ್ರೀಗಳು ಚುನಾವಣ ಕಣಕ್ಕಿಳಿದರೇ ಇಡೀ ರಾಜ್ಯದಾದ್ಯಂತ ಹಿಂದುತ್ವದ ಅಲೆ ಏಳಲಿದೆ ಎಂಬುದು ಹಿಂದುತ್ವ ಪ್ರತಿಪಾದಕರ ಅಭಿಮತ.
ಈಗಾಗಲೇ ಶ್ರೀರಾಮಸೇನೆಯ ಅದ್ಯಕ್ಷ ಪ್ರಮೋದ್ ಮುತಾಲಿಕ್ ಹಾಗೂ ಕಾರ್ಯದ್ಯಕ್ಷರಾದ ಆಂದೋಲಾಶ್ರೀಗಳು ಶಿವಸೇನೆ ಪಕ್ಷದ ವರಿಷ್ಠ ಉದ್ಭವ್ ಠಾಕ್ರೆ ಭೇಟಿ ಮಾಡಿ ಮತುಕತೆ ನಡೆಸಿದ್ದಾರೆ. ಶಿವಸೇನೆ ಪಕ್ಷದಿಂದ ಪ್ರಮೋದ್ ಮುತಾಲಿಕ್ ಹಾಗೂ ಆಂದೋಲಾಶ್ರೀಗಳು ಸೇರಿದಂತೆ ಶ್ರೀರಾಮ ಸೇನೆಯ ಅನೇಕ ಮುಖಂಡರು ಚುನಾವಣ ಕಣಕ್ಕೆ ಇಳಿಯಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.
ಈ ಬಗ್ಗೆ ವಿನಯವಾಣಿ ಆಂದೋಲಾ ಶ್ರೀಗಳನ್ನು ಸಂಪರ್ಕಿಸಿ ಕೇಳಿದಾಗ ಶಿವಸೇನೆ ವರಿಷ್ಠರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು ನಿಜ. ಶ್ರೀರಾಮ ಸೇನೆ ಸಂಘಟನೆಯಾಗಿ ತನ್ನ ಕೆಲಸ ಮುಂದುವರೆಸುತ್ತದೆ. ಆದರೆ, ಮುಂಬರುವ ಚುನಾವಣೆಯಲ್ಲಿ ಶ್ರೀರಾಮ ಸೇನೆಯ ಮುಖಂಡರು ಶಿವಸೇನೆ ಪಕ್ಷದಿಂದ ಹಲವು ಮತಕ್ಷೇತ್ರಗಳಲ್ಲಿ ಅಬ್ಯರ್ಥಿಗಳಾಗಿ ಕಣಕ್ಕಿಳಿಯುವ ಚಿಂತನೆ ನಡೆದಿದೆ. ಜೇವರಗಿ ಕ್ಷೇತ್ರದಿಂದಲೂ ಶಿವಸೇನೆ ಅಬ್ಯರ್ಥಿ ಸ್ಪರ್ದೆ ಮಾಡುವುದು ಖಚಿತ. ಆದರೆ, ಅಬ್ಯರ್ಥಿ ಯಾರು ಎಂಬುದು ಇನ್ನು ನಿರ್ಧರಿಸಬೇಕಿದೆ ಎಂದು ತಿಳಿಸಿದ್ದಾರೆ.