ಶಹಾಪುರಃ ಇಂದಿನಿಂದ ನಗರಸಭೆ ನೌಕರರಿಂದ ಮುಷ್ಕರ
yadgiri, ಶಹಾಪುರಃ ರಾಜ್ಯ ಸರ್ಕಾರಿ ನೌಕರರ ಸಂಘ ರಾಜ್ಯದಾದ್ಯಂತ ಕರೆ ನೀಡಿದ್ದ ಅನಿರ್ಧಿಷ್ಟ ಮುಷ್ಕರವನ್ನು ಬೆಂಬಲಿಸಿ ಇಲ್ಲಿನ ನಗರಸಭೆಯ ಕರ್ನಾಟಕ ರಾಜ್ಯ ಪೌರ ನೌಕರರ ಸಂಘ ಬೆಂಬಲಿಸಿ ಮಾ. 1 ರಿಂದ ಸೇವೆಗೆ ಹಾಜರಾಗದಿರಲು ನಿರ್ಧರಿಸಿದ್ದು, ಈ ಕುರಿತು ತಹಸೀಲ್ದಾರರು ಸೇರಿದಂತೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದೆ.
ಸರ್ಕಾರಿ ನೌಕರರ ಪ್ರಮುಖ ಬೇಡಿಕೆಗಳಾದ ವೇತನ ಭತ್ಯೆ ಮತ್ತು ಹಳೇ ಪಿಂಚಣಿ ಜಾರಿ ಸೇರಿದಂತೆ ಇತರೆ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮಾ.1 ರಿಂದ ರಾಜ್ಯದಾದ್ಯಂತ ಕೈಗೊಂಡ ಮುಷ್ಕರದಲ್ಲಿ ಭಾಗವಹಿಸುತ್ತಿದ್ದು, ನಗರಸಭೆ ನೌಕರರು ಯಾರೊಬ್ಬರು ಸೇವೆಗೆ ಹಾಜರಾಗುವದಿಲ್ಲ ಎಂದು ಮನವಿ ಪತ್ರದಲ್ಲಿ ತಿಳಿಸಿದೆ.
ರಾಜ್ಯ ಸರ್ಕಾರಿ ನೌಕರರ ಬೇಡಿಕೆ ಈಡೇರಿಸುವ ಮೂಲಕ ಸರ್ಕಾರ ಕೂಡಲೇ ಘೋಷಣೆ ಮಾಡಬೇಕು. ಇಲ್ಲವಾದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗಲಿದ್ದು, ನಮ್ಮಗಳ ಜತೆ ಇಡಿ ರಾಜ್ಯದ ಜನರ ಕೂಗು, ಶಾಪ ಸರ್ಕಾರಕ್ಕೆ ತಟ್ಟಲಿದೆ. ಕೂಡಲೇ ಸರ್ಕಾರ ಹಳೆ ಪಿಂಚಣಿ ಮತ್ತು 7 ನೇ ವೇತನ ಜಾರಿ ಕುರಿತು ಸ್ಪಷ್ಟ ಪಡಿಸಬೇಕೆಂದು ಪೌರ ನೌಕರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪೌರ ನೌಕರರ ಸಂಘದ ಅಧ್ಯಕ್ಷ ಶರಣು ನರಿಬೋಳಿ, ಸಹಾಯಕ ಕಾರ್ಯಪಾಲಕ ನಾನಾಸಾಬ ಮಡಿವಾಳಕರ್, ಕಿರಿಯ ಆರೋಗ್ಯ ನಿರೀಕ್ಷಕ ಹಣಮಂತ ಯಾದವ್, ಲೆಕ್ಕಾಧಿಕಾರಿ ಸುರೇಂದ್ರಕುಮಾರ, ಕಿರಿಯ ಅಭಿಯಂತರ ಮಲ್ಲಿಕಾರ್ಜುನ, ಹರೀಶ ಸಜ್ಜನ್, ಆಕಾಶ ಪಾಟೀಲ್, ಶರಣಬಸವ ಶೆಟಿಗೇರಾ, ಕಂದಾಯ ಅಧಿಕಾರಿ ಮಲ್ಲಿಕಾರ್ಜುನ ಕುರಕುಂಬಳ, ದುರ್ಗಪ್ಪ, ಗುರು ತಳವಾರ ಇತರರಿದ್ದರು.