ದೇಶದ ಬೆನ್ನೆಲುಬಾದ ರೈತನಿಗೆ ಪಿಂಚಣಿ ಸಿಗುವಂತಾಗಬೇಕು -ಅಣ್ಣಾ ಹಜಾರೆ
ಚಿತ್ರದುರ್ಗ : ನಗರದ ಹೊರವಲಯದಲ್ಲಿರುವ ಮುರುಘಾಮಠಕ್ಕೆ ಇಂದು ಹಿರಿಯ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಭೇಟಿ ನೀಡಿದರು. ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಇದೇ ವೇಳೆ ಮುರುಘಾ ಶರಣರು ಅಣ್ಣಾ ಹಜಾರೆ ಅವರಿಗೆ ಮಾಲೆ ಹಾಕಿ ಪುಸ್ತಕ ನೀಡಿ ಗೌರವಿಸಿದರು.
ಬೆಂಗಳೂರಿನಿಂದ ಹಾವೇರಿಗೆ ತೆರಳುವ ಮಾರ್ಗ ಮದ್ಯೆ ಅಣ್ಣಾ ಹಜಾರೆ ಚಿತ್ರದುರ್ಗದ ಮುರುಘಾಮಠಕ್ಕೆ ಭೇಟಿ ನೀಡಿದ್ದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ದೇಶದ ಬೆನ್ನೆಲುಬಾದ ರೈತನಿಗೆ ಅರವತ್ತು ವರ್ಷಗಳ ಬಳಿಕ ಪಿಂಚಣಿ ಸಿಗುವಂತಾಗಬೇಕೆಂದರು. ಅಲ್ಲದೆ ದೇಶದಲ್ಲಿ ರೈತರ ಸರಣಿ ಆತ್ಮಹತ್ಯೆಗಳು ನಡೆಯುತ್ತಿದ್ದು ಕೃಷಿ ಬಿಕ್ಕಟ್ಟು ಸೃಷ್ಠಿಯಾಗಿದೆ. ಆದರೆ. ಆಳುವ ಸರ್ಕಾರಗಳು ಮಾತ್ರ ರೈತನ ಆತ್ಮಹತ್ಯೆ ತಡೆಯಲು ಕ್ರಮ ಕೈಗೊಂಡಿಲ್ಲ ಎಂದರು.
ಬರುವ ಮಾರ್ಚ್ 25ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಧರಣಿ ನಡೆಸುತ್ತೇನೆ. ರೈತರ ಬೇಡಿಕೆಗಳನ್ನು ಈಡೇರಿಸಬೇಕು. ಕಾಯಕ ಯೋಗಿಗೆ ಸಕಲ ಸವಲತ್ತುಗಳನ್ನು ಒದಗಿಸಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತೇನೆ. ರೈತಪರ ಹೋರಾಟಕ್ಕೆ ಮಠಾಧೀಶರು ಸೇರಿದಂತೆ ದೇಶದ ನಾಗರೀಕರೆಲ್ಲರೂ ಬೆಂಬಲಿಸುವ ವಿಶ್ವಾಸವಿದೆ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.