ಅನ್ನದ ಖಿಮ್ಮತ್ತು- ಸಾಸನೂರ ಬರಹ
ಹಾಸ್ಟೆಲ್ನಿಂದ ಓಡಿ ಹೋದ ಪ್ರಹಸನ ಭಾಗ-2
ತಾಳಿಕೋಟೆಯ ಸೈನಿಕ ತರಬೇತಿಯ ಹಾಸ್ಟೆಲನಲ್ಲಿ ಪ್ರವೇಶಿಸಿದ ಮಾರನೆಯ ದಿನವೇ ನಸುಕಿನ ನಾಲ್ಕು ಗಂಟೆಗೆ ಶಿಕ್ಷಕರು ಬಂದು ಚಿಲಕ ಬಾರಿಸಿದರು ಯಾರೋ ಸಹಪಾಠಿಯೊಬ್ಬ ಬಾಗಿಲು ತೆಗೆದ ಒಳಗೆ ಬಂದ ತಕ್ಷಣ ಅವರು ” ಮಕ್ಕಳೆ ಹೊತ್ತ್ಹೊಂಟ್ರಾಗ ಪರೀಕ್ಷೆ ಆದ ಇನ್ನಾ ಮೊಕ್ಕೊಂಡಿರಲೇ?” ಅಂದು ಮೂಲ್ಯಾನ ಗೂಟಕ್ಕ ಸಿಗಿಸಿದಬೆಲ್ಟು ತೆಗೆದು ಹೊಡಿಲಾಕ ಶುರುಮಾಡಿದರು.
ನಮಗಿಂತಲೂ ಮೊದಲೇ ದಾಖಲು ಪಡೆದಿದ್ದ ಕೆಲವರು ಮಲಗಿದ್ದ ಕೌದಿ ಮುಖದ ಮೇಲಿಂದ ತೆಗೆದು ಕುಕ್ಕರು ಕುಂತು ಮಗ್ಗಿ ಹೇಳ್ತಿದ್ದರು. ನಮಗ ಬೇಲ್ಟಿನೇಟೆ ಗತಿಯಾಯಿತು. ನಾಲ್ಕನೇ ತರಗತಿನಂತರ ಐದನೇ ತರಗತಿ ಆದ ಮೇಲೆ ಬಿಜಾಪುರಕ್ಕೆ ಹೋಗಿ ಬರೆಯಬೇಕಾದ ಪರೀಕ್ಷೆಗೆ ಆ ಗುರುಗಳು ನಾಲ್ಕನೇ ಮೊದಲ ದಿನವೇ ನಾಳೆ ಹೊತ್ತ್ಹೊಂಟ್ರಾಗ ಪರೀಕ್ಷೆ ಆದ ಅಂತ ಶುರುಮಾಡಿದರು.
ಬೆಲ್ಟಿನೇಟಿಗೆ ಅಂಜಿ ನಾನೂ ಮೂವತೈದರ ವರೆಗೆ ಮಗ್ಗಿ ಬಾಯ್ಪಾಟ ಮಾಡಿದ್ದೆ.ಬರು ಬರುತ್ತಾ ಶಿಕ್ಷೆಗಳು ಹೆಚ್ಚಿಗೆ ಆದವು ಹೊರತು ಕಡಿಮೆ ಆಗಲಿಲ್ಲ. ಸುಮಾರು ಎಂಟು ತಿಂಗಳುಗಳ ನಂತರ ಓಡಿ ಹೋಗುವ ಸಾಹಸಕ್ಕೆ ಕೈ ಹಾಕಿದೆ. ಅಂದ್ಹಂಗ ಮಾಳಿಂಗರಾಯನ ಮುಂಗಾರಿ ಜ್ವಾಳದ ರೊಟ್ಟಿ ಮನಗಂಡ ಉಂಡು ಮಕ್ಕೊಂಡವ ಒಮ್ಮಲೆ ಸಂಜೀಕೆ ಎದ್ದೆ. ಕತ್ತಲಾಗಿತ್ತು ಕತ್ತಲಿಗಿ ಅಂಜಿದರ ಹ್ಯಾಂಗ ನೀರಾಗ ಬಿದ್ದಿದ್ದೆ ಕೈಕಾಲು ಬಡೀಲೇಬೇಕಿತ್ತು ಹಂಗೆ ದಾರಿಗುಂಟ ಹೋದೆ ರಾತ್ರಿ ಎಷ್ಟಾಗಿತ್ತೋ ಏನೋ ಹುಣ್ಸಿಗಿ ಬಸ್ ಸ್ಟಾಂಡ್ ಗೆ ಬಂದ್ಹಾಂಗ.
ಆಕಡಿ ಈಕಡಿ ಯಾರೂ ಗುರುತು ಹಿಡಿಲಿಲ್ಲ. ರಾತ್ರಿ ಮೊಕ್ಕೊಲಾಕ ಜಾಗ ಸಿಕ್ಕಿತು ಅನ್ನುವಷ್ಟರಲ್ಲಿಯೇ ಶಹಾಪುರದ ಮಕ್ತಪ್ಪ ಮಾಸ್ಟರು ಕಾಣ್ಸಿದರು. ಎದೀ ಝಲ್ ಅಂತು ಒಂದು ಕ್ಷಣ ಆದರ ಅವರಿಗೆ ನಾನು ಕಾಣ್ಸಿಲಿಲ್ಲ ಅನ್ನೋದೆ ಆ ಹೊತ್ತಿನ ಸಮಾಧಾನ.
ಕಲ್ಲು ಪರ್ಸಿ ಸೀಟಿನ ಬುಡುಕ ಹವಾಯಿ ಚಪ್ಪಲ್ ತಲಿ ಕೆಳಾಗ ಇಟ್ಗೊಂಡು, ಇದ್ದ ಸಣ್ಣ ಟಾವೆಲನ್ನೆ ಹೊಚ್ಗೊಂಡು ಮೊಕ್ಕೊಂಡೆ. ಎಚ್ಚರಾದಾಗ ಹಕ್ಕಿಗಳು ಚಿಲಿಪಿಲಿ ಕೇಳಿ ನಸುಕಾಯ್ತು ಇನ್ನ ಇಲ್ಲೆ ಮೊಕ್ಕೊಂಡ್ರ ನನ್ನ ಕ್ಲೀನರ್ ಕೆಲಸಕ್ಕೆ ಕಲ್ಲು ಬೀಳ್ತಾದ ಅನ್ಕೊಂಡು ಬಸ್ ಸ್ಟಾಂಡ್ ನಿಂದ ಹೊರಗ ಬಂದ್ರ ಯಾವ ಲಾರಿನೂ ಕಾಣಲಿಲ್ಲ.
ಆವಾಗ ತಲಿಗೆ ಹೊಳೆದದ್ದೆ ನಮ್ಮ ಸ್ವಂತ ಊರು ಅರಿಕೇರಿ. ಅಲ್ಲಿಂದ ಸುಮಾರು ಹತ್ತು ಹದಿನೈದು ಕಿಲೋಮೀಟರ್ ಆಗ್ಬಹುದು. ಹುಂಬ ತೆಲಿ ಆದೇಶದಂತೆ ಕಾಲುಗಳು ವಿಧೇಯ ಆಳಿನಂತೇ ಪಾಲಿಸಿದವು. ನಂದೇನಾದ ಎಲ್ಲ ತಲೆ, ಕಾಲುಗಳ ಹೇಳಿದ್ಹಾಂಗ ಕೇಳುವ ಚಾಲಕ ಅಷ್ಟೇ. ಊರ ಹಾದಿ ಹಿಡಿವನಿಗೆ ನಸುಕಿನ ಮಬ್ಬುಗತ್ತಲು ಶತ್ರುವಾಗಿತ್ತು. ಏನಂದ್ರ ಏನೂ ಕಾಣ್ಸಿತಿರಲಿಲ್ಲ. ……….(ಮುಂದುವರೆಯುವದು..)
–ಆನಂದಕುಮಾರ ಸಾಸನೂರ. ಲೇಖಕರು.
ಆಂಗ್ಲ ಭಾಷೆ ಸಹಾಯಕ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಹಾಪುರ.