ಕಥೆಸರಣಿ

ನಾ ಅಂಬ ಗಣಮಗನೂ ಎದೆ ಹೊಡ್ಕೋಬೇಕಿತ್ತು..! ಸಾಸನೂರ ಬರಹ

ಅನ್ನದ ಕಿಮ್ಮತ್ತು ಭಾಗ- 4 ಸಾಸನೂರ ಬರಹ

ನಮ್ಮೂರಿನ ದಾರಿಯ ಒಂದು ಕಡೆ ವಿಶಾಲವಾದ ವಿಸ್ತಾರವಾದ ಸದಾ ನೀರಿನಿಂದ ತುಂಬಿದ ಕೆರೆ, ಇನ್ನೊಂದು ಕಡೆ ಸುಮಾರು ಎಪ್ಪತ್ತು ಎಂಬತ್ತು ಫೀಟು ಆಳವಾದ ತೆಗ್ಗು. ಆ ತೆಗ್ಗಿನಲ್ಲಿ ದಟ್ಟವಾಗಿ ಬೆಳೆದ ಸರಕಾರಿ ಜಾಲಿ ಹಾಗೂ ಕರಿಜಾಲಿ ಗಿಡ.

ಆ ಗಿಡಗಳ ತುಂಬ ಝಿಂಯ್.. ಅನ್ನುವ ಜೀರುಂಡೆ ಕೀಟಗಳು. ಜೀರುಂಡೆಗಳ ಶಬ್ದಕ್ಕೆ ನಾ ಅಂಬ ಗಣಮಗನೂ ಎದೀ ಒಡ್ಕೊಂಡು ಸಾಯಬೇಕು ಅಷ್ಟೊಂದು ಭಯಾನಕ. ಅಂತಾದರಾಗ ಯಾವಾಗಲೋ ಕೇಳಿದ್ದ ಕೆಂಪು ಸೀರಿ ಉಟ್ಟ ದೆವ್ವದ ಕತಿಯೊಂದು ಬ್ಯಾಡ ಬ್ಯಾಡ ಅಂದ್ರನೂ ಪದೇಪದೇ ನೆನಪಿಗಿ ಬರ್ರಕತ್ತಿತ್ತು.

ಮೊದಲೇ ನಿರ್ಜನ ಪ್ರದೇಶ ಯಾರೋ ಒಬ್ಬ ಮುದುಕ ಬಂದ ಹಗಲಾಗಿದ್ದರಿಂದ ಅಂಜಿಕೇನು ಆಗಲಿಲ್ಲ. ಅವನೇ ಮೂಶಿ ಸೇದ್ಕೊಂತ ಬಂದು ” ಯಾರ ಮನೀಗಿ ಹೊಂಟೆಪ ಒಬ್ಬೊನೆ ಹೊಡೆದು ಹಾಕಿದರೂ ಹೆಣನೂ ಸಿಗಂಗಿಲ್ಲ ಈ ತೆಗ್ಗಿನ್ಯಾಗ” ಅಂದ.
” ಸಾಸನೂರ ತಿಪ್ಪಣ್ಣ ಸಾವ್ಕಾರನ ಮನಿಗಿ” ಅಂದೆ. ” ದೌಡ ಹೋಗು ” ಅಂದ ಆ ಮುದುಕ.

ನಾ ಹಿಂದಕ ತಿರುಗಿ ನೋಡಲಾರ್ದಂಗ ದೊಡ್ಡಪನ ಮನಿ ದಾರಿ ಹಿಡದ್ಯಾ. ಊರ ಅಗಸಿಕಟ್ಯಾಗ ಕುಂತ ಸಂಬಂಧಿಕರು ಆರಾಮಿದೇನಪಾ ಉರಾಗ ನಿಮ್ಮಪ್ಪ ಅವ್ವ ಆರಾಮಾರೇನೂ ಅಂತ ಕೇಳಿದೊರಿಗಲ್ಲ ಹೂಂ ಅಂದೆ. ಮನೀಗಿ ಹೋಗಾಣ ದೊಡ್ಡಪ್ಪ , ದೊಡ್ಡವ್ವ ಕುಶಲ ಮಾತುಕತೆ ಆದ ಮೇಲೆ. ” ಜಳಕ ಮಾಡು ಬಚ್ಚಲದ ಒಲೀ ಮ್ಯಾಗ ಹಾಂಡೆದಾಗ ನೀರು ಕಾಯ್ದಾವ ” ಅಂದರು.

ಜಳಕ ಮಾಡಿ ಬಿಸಿ ಬಿಸಿ ನಾಲ್ಕು ರೊಟ್ಟಿ ಹುಳ್ಳಿ ಕಾಳು ಖಾರಬ್ಯಾಳಿ ಉಂಡ ಮ್ಯಾಲೆ ಎಲ್ಲರೂ ಹೊಲಕ್ಕ ಹೊಂಟಿದ್ದರು. ನಾನು ಅವರ ಸಂಗಡ ಹೊಲಕ್ಕ್ಹೋದೆ. ಹೆಸರಿನ ರಾಶಿ ನಡೆದಿತ್ತು. ನಡು ನಡುವೆ ಆವಾಗಿಷ್ಟು ಇವಾಗಿಷ್ಟು ಮಳಿ ಬರೋದು ನಾವೆಲ್ಲೊರು ಗುಡಿಸಲುನ್ಯಾಗ ಕೊಡೋದು ಮತ್ತ ಮಳಿ ನಿಂದ್ರಾಣ ಹೆಸರು ಬಿಡಸಾದು. ಮಜಾ ಬಂತು ಒಂದು ಹತ್ತು ದಿನ.

ಹೆಸರಿನ ರಾಶಿಯಲ್ಲಿ ಯಾರಿಗೂ ಪುರುಸೊತ್ತಿರಿಲಿಲ್ಲ ಅದಕ್ಕೆ ಜಾಸ್ತಿ ಯಾರೂ ನನಗೇನೂ ಕೇಳಲಿಲ್ಲ. ಹೆಸರಿನ ರಾಶಿ ಮುಗ್ ದ ಮ್ಯಾಲ ಶುರುಮಾಡಿದರು ಪೋಲಿಸರ ರೀತಿ ವಿಚಾರಣೆ ಮಾಡ್ಲಾಕ. ಹೇಳೊಷ್ಟು ಹೇಳಿದೆ. ಕುತ್ತಿಗೆ ಬರಾಮಟ ಸಾಕು ಸಾಕಾಯ್ತು. ನಡಿ ಆನಂದ ಇಲ್ಲಿಗೆ ಇಷ್ಟು ಸಾಕು ಅಂದು ಸಂಜೀಕೆ ಟಾವೆಲ್ ಕೊಳ್ಳಿಗಿ ಸಿಗಸ್ಕೊಂಡು ಮತ್ತೆ ಪ್ರಯಾಣ ಮುಂದುವರೆಸಿದೆ.

ಎಲ್ಲಿಗಿ ಹೋಗ್ಬೇಕು ಯಾಕ್ ಹೋಗ್ಬೇಕು ಯಾವ ನಿರ್ಧಾರ ಇರಲಿಲ್ಲ. ಎಲ್ಲವೂ ಕಾಲ್ಗಳ ಮೇಲೆ ಹಾಕಿ ಹೊಂಟೆ. ಈಗ ಯಾರದೂ ಯಾವಂದೂ ಅಂಜಿಕೆ ಇರಲಿಲ್ಲ.
ಹೊಂಬತನ ತಲಿಗೇರಿ ಕಿರೀಟವಾಗಿ ಅಲಂಕರಿಸಿತ್ತು. ಊರ ಕ್ರಾಸ್ ಬಂತು ಕೆನಾಲ್ ದಾರಿ ಹಿಡದ್ ಹೋದರ ಗುಂಡಲಗೇರಿ ಎಂಟು ಕಿಲೋಮೀಟರ್. ಕಾಲುಗಳು ಕೆನಾಲನ ಅಚ್ಚುಕಟ್ಟು ರಸ್ತೆಯನ್ನು ಹಿಡದವು.( ಮುಂದುವರೆಯುವದು..)

ಆನಂದಕುಮಾರ ಸಾಸನೂರ. ಆಂಗ್ಲ ಭಾಷೆ ಪ್ರಾಧ್ಯಾಪಕರು. ಡಿಗ್ರಿ ಕಾಲೇಜು. ಶಹಾಪುರ.

 

Related Articles

One Comment

Leave a Reply

Your email address will not be published. Required fields are marked *

Back to top button