ಕಥೆಸರಣಿ

ಮಬ್ಬುಗತ್ತಲಲ್ಲಿ ಕಾಲುದಾರಿಯಲಿ ಗುಂಡಲಗೇರಿ ತಲುಪಿದಾಗ..!

ಅನ್ನದ ಕಿಮ್ಮತ್ತು – ಭಾಗ- 5 ಸಾಸನೂರ ಬರಹ

ಆನಂದಕುಮಾರ ಸಾಸನೂರ

ಕತ್ತಲಾಗುವ ಮೊದಲು ಗುಂಡಲಗೇರಿ ಸೇರ್ಬೇಕಿತ್ತು. ಅದಕ್ಕಾಗಿ ಅವಸರವಸರವಾಗಿ ಹೆಜ್ಜೆ ಹಾಕಿದೆ. ಕೆನಾಲ್ ನ ನೀರಿನ ಶಬ್ದ ಜೋರಾಗಿತ್ತು. ಮುಂದ ಮುಂದ ಹೋದ್ಹಾಂಗ ನೀರಿನ ಶಬ್ದ ಕಡಿಮೆಯಾಯಿತು. ನಾರಾಯಣಪುರ ಎಡದಂಡೆಯ ಮುಖ್ಯ ಕೆನಾಲ್ ನ ವಿಶಾಲ ನೀರಿನ ಹರಿವನ್ನು ಮೈಮರೆತು ನೋಡುತ್ತಾ ನಿಂತಿದ್ದೆ ಒಂದೈದು ನಿಮಿಷ.

ಸೂರ್ಯಾಸ್ತವಾಗುತ್ತದ್ದಂತೆ ಎಚ್ಚರಾಯಿತು. ದಡಬಡಿಸಿ ಕಾಲುಗಳು ತಾವೆ ಹೋಗುವ ಅವಸರಮಾಡಿದವು. ಹೆಸರಿಗೆ ತಕ್ಕಂತೆ ಗುಂಡಲಗೇರಿ ಊರ ತುಂಬಾ ಗುಂಡುಗಲ್ಲುಗಳು ಸಣ್ಣವು ದೊಡ್ಡುವು, ವಿಶಾಲವಾದವು. ಗುಂಡುಗಲ್ಲುಗಳ ಮೇಲೆ ಹೆಜ್ಜೆ ತಪ್ಪಿ ಕತ್ತಲಾಗ ಜೋಲಿ ಹೋಗಿ ಬಿದ್ದಂಗ ಆಗ್ತಾ ಇತ್ತು.

ಹಂಗು ಹಿಂಗೂ ನೀಲಮ್ಮ ಅತ್ತಿ ( ಆಯಿ) ಮನಿಗಿ ಮುಟ್ಟಿದೆ. ಹ್ಯಾಂಗೂ ಆಕಿ ನೆರೆ ಮನೆಯ ಮುದುಕಿ ಎಲ್ಲಾ ವಿಷಯ ಹೇಳಿದ್ದಳಂತ ಕಾಣ್ತಾದ ಅತ್ತಿ ಏನೂ ಕೇಳಲಿಲ್ಲ. “ಕತ್ತಲಾಗ ಯಾಕ ಬಂದ್ಯೋ ಹುಳ ಹುಪ್ಪಟಿ ಇರ್ತಾವ ಅಡಿವ್ಯಾಗ ನಿನಗೇನು ಅಂಜಿಕಿಲ್ಲ ಬಿಡಪ ” ಅಂದಳು.

ಚಿಮಣಿ, ಕಂದೀಲು ಹಚ್ಚಿ ಕೈಕಾಲು ತೊಕ್ಕೊಂಡ ಈಬತ್ತಿ (ವಿಭೂತಿ) ಹಚ್ಕೊಂಡು ಊಟಕ್ಕೆ ತಯಾರು ಮಾಡಿದಳು. ದೊಡ್ಡ ಮನ್ಯಾಗ ಅತ್ತಿ ಒಬ್ಬಾಕೀನೆ ಇರ್ತಿದ್ದಳು. ಇದ್ದೊಬ್ಬ ಮಗ ಶಂಕರಗೌಡ ದೂರದೂರಿನ್ಯಾಗ ಸರ್ಕಾರಿ ನೌಕರಿಯಲ್ಲಿದ್ದ, ಒಬ್ಬ ಮಗಳು ಅದೇ ಊರಿನಲ್ಲೇ ಮದುವೆ ಮಾಡಿ ಕೊಟ್ಟಿದ್ದಳು.

ಊಟ ಮಾಡಿ ಮ್ಯಾಳಿಗಿ ಮ್ಯಾಲ ಕೌದಿ ಹಾಸ್ಕೊಂಡು ಮಕ್ಕೊಂಡವ ನಸುಕಿಗೆ ಮನಿ ಹಿಂದಿನ ಬಸುರಿಗಿಡದಾಗಿನ ಗಿಳಿಗಳ ಶಬ್ದಕ್ಕೆ ಎದ್ದೆ. ಮತ್ತೊಂದು ದಿನದ ಶುಭಾರಂಭವಾಯ್ತು ಮತ್ತೊಂದು ಊರಿನಲ್ಲಿ……….ಮುಂದುವರೆಯುವದು..

Related Articles

Leave a Reply

Your email address will not be published. Required fields are marked *

Back to top button