ಕಥೆಸರಣಿ

ಹಳ್ಳಿ ಸೊಬಗು, ಗುಂಡಲಗೇರಿಯಲ್ಲೇ ಪ್ರಾಥಮಿಕ ಶಿಕ್ಷಣ ಕಲಿಕೆ ಚಿಗುರು

ಅನ್ನದ ಕಿಮ್ಮತ್ತು – ಭಾಗ – 6 ಸಾಸನೂರ ಬರಹ

ಗುಂಡಲಗೇರಿ ಪಾಪದ ಊರು. ಸಾವಿರಾರು ಎಕರೆ ಜಮೀನು, ಲಕ್ಷಾಂತರ ಜನರಿಗೆ ಜಲದಾಹ ತಣಿಸಲು ತನ್ನ ಜಮೀನು ಕೊಟ್ಟ ಊರಿಗೆ ನೀರಾವರಿಯ ಸವಲತ್ತು ಇರಲಿಲ್ಲ. ಇಡೀ ಊರ ತುಂಬಾ ಗುಂಡುಗಲ್ಲುಗಳು ಸಣ್ಣವು ದೊಡ್ಡುವು , ಬೃಹತ್ತಾದ ಬಂಡೆಗಲ್ಲುಗಳು.

ಈ ವಿಶಾಲವಾದ, ಬೃಹತ್ ಬಂಡೆಗಲ್ಲುಗಳೇ ಕೆಲ ಮನೆಗಳಿಗೆ ಬಲವಾದ ಭದ್ರ ಬುನಾದಿಯಾಗಿದ್ದವು. ಅಂತಹ ಮನೆಗಳಲ್ಲಿ ನಮ್ಮ ಕಾಕ ರಾವುತಪ್ಪ ಸಾಹುಕಾರ್ ನ ಮನೆಯೂ ಒಂದಾಗಿತ್ತು. ಊರಿನ ಕುಡಿಯುವ ನೀರಿನ ಕೊರತೆ ನೀಗಿಸಲು ಹತ್ತು ಕಿಲೋಮೀಟರ್ ದೂರದ ಸಿಹಿ ನೀರ ಬಾವಿಯೇ ಆಸರೆಯಾಗಿತ್ತು.

ಇನ್ನುಳಿದ ಬಟ್ಟೆ, ದನಕರುಗಳಿಗೆ ಊರ ಇಳುಕಲಿನಲಿ ಪ್ರಕೃತಿ ನಿರ್ಮಿತ ಕೆರೆಯ ಅನುಕೂಲವಾಗಿತ್ತು. ಮರುದಿನ ಎದ್ದು ಅಂಬ್ರಿಕಡ್ಡಿ ಮುರಿದು ಹಲ್ಲು ತಿಕ್ಕೊಂಡು, ಜಳಕ ಮಾಡಿ ರೊಟ್ಟಿ ಖಾರಬ್ಯಾಳಿ ಉಂಡ ಕೂಡಲೇ ರಾವುತಪ್ಪ ಕಾಕಾನ ಎತ್ತಿನಬಂಡಿ ಕುಡಿಯುವ ನೀರಿನ ಕೊಡ ತೆಗೆದುಕೊಳ್ಳಲು ಆಯಿ ಮನಿಗಿ ಬಂದ.

ನನ್ನ ನೋಡಿ ಗಾಬರಿಯಿಂದ ಯಾವಾಗಬಂದ್ಯೊ ಮಾರಾಯ, ಯಾರ್ಯಾರು ಬಂದಿರಿ? ಇರಲಿ ಬಾ ಗಾಡ್ಯಾಗ ಕೂಡು ನೀರು ತರ್ಲಾಕ ಹೋಗಮು ಅಂದ. ನನಗರ ಏನು ಕೆಲಸ ಇತ್ತು. ಬೆಳ್ಳಗ, ತೆಳ್ಳಗ ಒಳ್ಳೆಯ ಆರೋಗ್ಯವಂತ ಕಿಲಾರಿ ಎತ್ತಗೋಳು ನೊಗ ಹೊತ್ತು ಹೂಂಕರಿಸುತ್ತಿದ್ದವು ಓಡ್ಲಾಕ. ಎತ್ತರ ಗಾಲಿಯ ಎತ್ತಿನಬಂಡಿ ಅದು. ಕಾಕಾ ತಾಮ್ರದ ಧೀಡಿ ಕೊಡಗಳಗನ್ನ ಗಾಡಿಯಲ್ಲಿ ಇಟ್ಟು ಹಗ್ಗದಿಂದ ಬಿಗಿದ.

ಧೀಡಿ ಕೊಡ ಅಂದ್ರ ಒಂದೊಂದು ಕೊಡದಾಗ ಈಗಿನ ಮೂರು ಕೊಡಗಳಗನ್ನ ತುಂಬಿಸಬಹುದು. ಅಂತಹ ಹತ್ತು ಕೊಡಗಳಗನ್ನ ಕಟ್ಟಿ ಬಂಡಿ ಏರಿ ಎತ್ಗೊಳ ಬಾಲ ತಿರಿವಿದ. ಅದೆಲಿತ್ತೋ ಸಿಟ್ಟು ಆ ಎತ್ಗೊಳಿಗಿ ಓಡ್ಲಾಕ ಶುರುಮಾಡಿದವು ಬಂಡೆಗಲ್ಲುಗಳ ಮ್ಯಾಲೆ ಮುಗ್ಗರಿಸಿ ಬಿದ್ದೆ. ಗಟ್ಟಿ ಹಿಡದ್ ಕೂಡು ಮತ್ ಬಂಡಿ ಕೆಳಾಗ ಬಿದ್ದೆಂದರ ಎಲುವು ಮುರಿತಾವ ಅಂದ.

ಗುಂಡುಗಲ್ಲುಗಳ ದಾರಿ ಮುಗಿದು ಮಣ್ಣಿನ ದಾರಿಯಲ್ಲಿ ಎತ್ತುಗೊಳು ಹುಚ್ಚು ಹಿಡದ್ಹಂಗ ಒಡಾಕ್ಹತ್ತಿದವು. ನನಗ ಕೃಷ್ಣನ ರಥದಾಗ ಕುಂತಿನಿ ಅನ್ಸಿತು. ಅಷ್ಟೊಂದು ರೋಮಾಂಚಕ ಮತ್ತು ಸಾಹಸವಾಗಿತ್ತು ಎತ್ತಿನಬಂಡಿ ಪ್ರಯಾಣ. ಮೂರು ಸರತಿ ಕುಡಿಯುವ ನೀರಿನ ಬಾವಿಗೆ ಹೋಗಿ ಬಂದು ಎತ್ತುಗೊಳ ಕೊಳ್ಳ ಹರಿದು ಅವುಗಳಿಗೆ ಕಣಕಿ ಹಾಕಿ, ಹಿಂಡಿ ತಿನಿಸಿ ನೀರು ಕುಡಿಲ್ಯಾಕ ಹಾಕೋದು.

ಆಮೇಲೆ ಹೊಲಕ್ಕ ಹೋಗುದು ಮನಿಗಿ ಬರೋದು, ಸಂಜೀಕೆ ಅಗಸಿ ಕಟ್ಯಾಗ ಹರಟಿ ಹೊಡೆಯೊದು. ಗುಂಡಲಗೇರಿ ಪ್ರಾಮರಿ ಸ್ಕೂಲ್ ಮಾಸ್ಟರ್ ಒಂದಿನ ನನ್ನ ಬಗ್ಗೆ ಆಯಿಗಿ ವಿಚಾರಿಸಿದರು. ಅವರು ತಮ್ಮ ಸ್ಕೂಲಿಗೆ ನನಗೆ ಬರಲು ಹೇಳಿದರು. ಅದರಂತೆ ಮರುದಿನ ಬೆಳಗ್ಗೆ ಸ್ಕೂಲಿಗೆ ಹೋದೆ.

ಅವರ ಎಲ್ಲ ಪ್ರಶ್ನೆಗಳಿಗೂ ಸಂಯಮದಿಂದ ಉತ್ತರ ನೀಡಿ ಅವರ ವಿಶ್ವಾಸ ಗಳಿಸಿದೆ. ಒಂಬತ್ತನೇ ಮಗ್ಗಿ ಹೇಳು ಅಂದರು ಹೇಳಿದೆ. ಹದಿನಾಲ್ಕರ ಮಗ್ಗಿ ಹೇಳು ಅಂದರು ಅದನ್ನು ಹೇಳಿದೆ. ಶಬ್ಬಾಷ್ ಅಂದರು ಸರ್ ಅದುವರೆಗೂ ಬರಿ ಎಟು, ಅವಮಾನಗಳ ಕಹಿ ಅನುಭವಿಸಿದವನಿಗೆ ಒಮ್ಮಲೆ ಹೋಳಿಗೆ, ಶೀಕರಣಿ ಸಿಕ್ಕಂತಾಯ್ತು. ಏನಾದರೂ ಆಗಲಿ ಇನ್ನೂಮುಂದಿನ ಶಿಕ್ಷಣ ಇಲ್ಲೇ ಗುಂಡಲಗೇರಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಅಂತ ನಿರ್ಧಾರ ಮಾಡಿದೆ.

ಯಾಕಂದರ ಇಡೀ ಶಾಲೆಯಲ್ಲಿ ನಾನೊಬ್ಬನೇ ಶಾಣ್ಯಾ. ಇಂತಹ ಅಪರೂಪದ ಪದವಿ ಯಾರಿಗೆ ಸಿಗ್ತಾದ. ಒಟ್ಟಿನಲ್ಲಿ ಗೋಲ್ಡನ್ ಡೇಯ್ಸ್ ಶುರುವಾದವು ಅಂತ ಹಾಯಾಗಿದ್ದೆ. ತಾಳಿಕೋಟೆಯಿಂದ ಓಡಿ ಬಂದು ಹದಿನೈದು ದಿನಗಳಾಗಿದ್ದವು. ನನಗ್ಯಾವುದರ ಬಗ್ಗೆ ಖಬರ್ ಇರಲಿಲ್ಲ.

Related Articles

Leave a Reply

Your email address will not be published. Required fields are marked *

Back to top button