ರಾಜ್ಯದೆಲ್ಲಡೆ ನಕಲಿ ಬೀಜ ಹಾವಳಿಃ ಜಿಲ್ಲೆಯಲ್ಲಿ ಮುಂಜಾಗೃತವಾಗಿ ದಾಳಿ ಪರಿಶೀಲನೆ
ಕೋಲ್ಡ್ ಸ್ಟೋರೇಜ್ಗೆ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಭೇಟಿ ಪರಿಶೀಲನೆ
ರಾಜ್ಯದಲ್ಲಿ ಹಲವಡೆ ದಾಳಿ ನಕಲಿ ಬೀಜ ವಶಕ್ಕೆ, ಮುಂಜಾಗೃತವಾಗಿ ಜಿಲ್ಲೆಯಲ್ಲೂ ಪರಿಶೀಲನೆ
ಶಹಾಪುರಃ ರಾಜ್ಯದಲ್ಲಿ ನಕಲಿ ಬೀಜಗಳ ಹಾವಳಿ ಉಂಟಾಗಿದ್ದು, ಹಲವಡೆ ನಕಲಿ ಬೀಜ ಮಾರಾಟಗಾರರನ್ನು ವಶಕ್ಕೆ ಪಡೆಯಲಾಗಿದೆ. ಅದರಂತೆ ಜಿಲ್ಲೆಯಲ್ಲೂ ನಕಲಿ ಬೀಜಗಳ ಮಾರಾಟ ಜಾಲವಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ನಗರದ ಕೈಗಾರಿಕಾ ಪ್ರದೇಶದ ಉಷಾ ಕೋಲ್ಡ್ ಸ್ಟೋರೇಜ್ಗೆ ಭೇಟಿ ಪರಿಶೀಲನೆ ನಡೆಸಿದ್ದು, ಅಂತಹ ಯಾವುದೇ ಲಕ್ಷಣ ಕಂಡು ಬರಲಿಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಆರ್.ದೇವಿಕಾ ಅವರು ತಿಳಿಸಿದರು.
ಮಂಗಳವಾರ ಇಲ್ಲಿನ ಕೋಲ್ಡ್ ಸ್ಟೋರೇಜ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮೊದಲೇ ಪ್ರತಿ ವರ್ಷ ರೈತರು ಒಂದಿಲ್ಲೊಂದಿ ಸಂಕಷ್ಟ ಎದುರಿಸುವಂತಾಗಿದೆ. ಬರ, ನೆರೆ ಹಾವಳಿ ಹೊಡೆತಕ್ಕೆ ಹೈರಾಣಾಗಿದ್ದ ರೈತಾಪಿ ಜನ ಈಗ ಕೊರೊನಾ ಮಹಾಮಾರಿಯಿಂದ ತತ್ತರಿಸಿದ್ದಾರೆ. ಪ್ರಸ್ತುತ ರೈತ ಬೆಳೆದ ಬೆಳೆಗೆ ಸಮರ್ಪಕ ಬೆಲೆ ಇಲ್ಲದೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಇಂತಹದರಲ್ಲಿ ನಕಲಿ ಬೀಜ ಖರೀದಿಸಿ ರೈತರು ಬೆಳೆ ಫಲ ಬಾರದೆ ಕೊಚ್ಚಿ ಹೋಗುವಂತಾಗಬಾರದು.
ರೈತರಿಗೆ ನಕಲಿ ಬೀಜಗಳ ಮಾರಾಟದಿಂದ ಮೋಸ ಹೋಗಬಾರದು ಎಂಬ ಉದ್ದೇಶದಿಂದ ನಕಲಿ ಬೀಜಗಳನ್ನು ಸಂಗ್ರಹಿಸುವ ಅಡ್ಡೆಗಳನ್ನು ಪತ್ತೆ ಹಚ್ಚುವ ಕಾರ್ಯ ಭರದಿಂದ ಸಾಗಿದೆ. ಈ ಸ್ಟೋರೇಜ್ನಲ್ಲಿ ಅನುಮಾನ ಬಂದ ಹಿನ್ನೆಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಯಿತು ಎಂದ ಅವರು, ಕೋಲ್ಡ್ ಸ್ಟೋರೇಜ್ನಲ್ಲಿ 63 ಸಾವಿರ ಚೀಲ ಮೆಣಸಿನಕಾಯಿ ಸಂಗ್ರಹಿಸಿಲಾಗಿದೆ. ವರ್ಷಕ್ಕೆ ಪ್ರತಿ ಚೀಲದ ಬಾಡಿಗೆ 165 ರೂಪಾಯಿ ದರ ನಿಗದಿಪಡಿಸಲಾಗಿದೆ ಎಂದು ಸ್ಟೋರೇಜ್ ಮುಖ್ಯಸ್ಥರು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಅಲ್ಲದೆ ಇಲ್ಲಿ ಸಂಗ್ರಹಿಸಲಾದ ಮೆಣಸಿನಕಾಯಿ ಕೇವಲ ರೈತರದ್ದಾಗಿದೆ. ವರ್ತಕರ ಮತ್ತು ದಲ್ಲಾಳಿಗಳ ಮೆಣಸಿನಕಾಯಿ ಅಲ್ಲ ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ. ಆದರೆ ಸಂಗ್ರಹಿಸಿದ ರೈತರ ಮಾಹಿತಿ ಲಭ್ಯವಾಗಿಲ್ಲ. ಕೂಡಲೇ ಸಂಗ್ರಹಕಾರರ ಮಾಹಿತಿ ಪಡೆಯುವಂತೆ ಸಹಾಯಕ ಕೃಷಿ ನಿರ್ದೇಶಕರಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕ ಗೌತಮ್, ಜಾಗೃತ ದಳದ ಅಧಿಕಾರಿ ರೂಪ ಎಂ.ಸಾಹೇಬ ಇದ್ದರು.