ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸಿ-ಅಬ್ಬೆ ತುಮಕೂರ ಶ್ರೀ
ಅಪ್ಪನ ಶಖಾಪುರ ಜಾತ್ರಾ ಮಹೋತ್ಸವ- ಧರ್ಮ ಸಭೆ
ಯಾದಗಿರಿ, ಶಹಾಪುರಃ ಭೂಮಂಡಲದಲ್ಲಿ ಜನಿಸಿದ ಸಕಲ ಜೀವಿಗಳಿಗೆ ಬದುಕು ಎನ್ನುವ ನಶ್ವರದ ಕಗ್ಗಂಟು ನೀಡಿದ ಭಗವಂತ ದಿನದ ಜಂಜಡಗಳಲ್ಲಿ ಜೀವನದ ಮೌಲ್ಯಗಳನ್ನೇ ಮರೆತ ಮನಸ್ಥಿತಿಯಲ್ಲಿ ಬಾಳು ಸಾಗುತ್ತಿದೆ ಎಂದು ಅಬ್ಬೇ ತುಮಕೂರ ಶ್ರೀ ವಿಶ್ವರಾಧ್ಯರ ಸಂಸ್ಥಾನದ ಪೀಠಾಧಿಪತಿ ಡಾ.ಗಂಗಾಧರ ಶಿವಾಚಾರ್ಯರಯ ವಿಷಾಧ ವ್ಯಕ್ತಪಡಿಸಿದರು.
ತಾಲೂಕಿನ ಭೀಮರಾಯನ ಗುಡಿ ಹತ್ತಿರದ ಅಪ್ಪನ ಶಖಾಪುರ ಗ್ರಾಮದಲ್ಲಿ ನಡೆದ 17 ನೇ ವರ್ಷದ ವಿಶ್ವರಾಧ್ಯರ ಜಾತ್ರಾ ಮಹೋತ್ಸವ ಅಂಗವಾಗಿ ರಥೋತ್ಸವ ನಂತರ ನಡೆದ ಧರ್ಮಸಭೆಯ ಸಾನ್ನಿಧ್ಯವಹಿಸಿ ಆಶೀವರ್ಚನ ನೀಡಿದರು. ಮನುಷ್ಯನ ಜನ್ಮದಲ್ಲಿ ಬದುಕಿನ್ನುದ್ದಕ್ಕೂ ವಿಶ್ವ ಶಾಂತಿಗಾಗಿ ತಮ್ಮನ್ನು ಅರ್ಪಿಸಿಕೊಂಡ ಮಹಾತ್ಮರಲ್ಲಿ ಸದ್ಗುರು ವಿಶ್ವರಾಧ್ಯರು ಇಂದು ಕೋಟ್ಯಂತರ ಭಕ್ತರ ಜನಮಾನಸದಲ್ಲಿ ಹಜರಾಮರವಾಗಿದ್ದಾರೆ.
ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವದು ಮಾನವಧರ್ಮದ ಪ್ರಮುಖ ಸಂದೇಶವಾಗಿದ್ದು, ಇದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ದೋರನಹಳ್ಳಿಯ ವೀರಮಹಾಂತ ಶಿವಾಚಾರ್ಯರು ಮತ್ತು ಮಹಾಂತಯ್ಯ ಸ್ವಾಮಿ ಇತರರು ಉಪಸ್ಥಿತರಿದ್ದರು. ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಸುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.