ರಾಯಚೂರಿಗೂ ಜಲಧಾರೆ ಯೋಜನೆಃ ಸಿಎಂ ಅಸ್ತು
ಜಲಧಾರೆ ಮೂಲಕ ಜಿಲ್ಲೆಗೆ ಕುಡಿಯುವ ನೀರು ಪೂರೈಕೆ – ಸಿಎಂ ಕುಮಾರಸ್ವಾಮಿ
ರಾಯಚೂರಃ ಜಲಧಾರೆ ಯೋಜನೆಯ ಮೂಲಕ ಸಮಗ್ರ ರಾಯಚೂರು ಜಿಲ್ಲೆಗೆ ಕುಡಿಯುವ ನೀರು ಒದಗಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆ. ಕೂಡಲೇ ಪ್ರಸ್ತಾವನೆಗೆ ಅನುಮೋದನೆ ನೀಡುವ ಮೂಲಕ ಇಡಿ ಜಿಲ್ಲೆಗೆ ನೀರು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.
ಮಾನ್ವಿ ತಾಲೂಕಿನ ಕರೇಗುಡ್ಡದಲ್ಲಿ ಜನತಾದರ್ಶನ, ಗ್ರಾಮವಾಸ್ತವ್ಯ ಹಾಗೂ ಮಾನ್ವಿ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ರೈಲಿನ ಮೂಲಕ ಬೆಂಗಳೂರಿನಿಂದ ಆಗಮಿಸಿದ ಅವರು,
ಅತಿಥಿ ಗೃಹದಲ್ಲಿ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸುವ ಮೂಲಕ ಕೆಲವು ಯೋಜನೆ ಅನುಷ್ಠಾನ ಕುರಿತು ನಿರ್ದೇಶನ ನೀಡಿದರು.
ಸತತ ಬರಗಾಲ ಆವರಿಸಿರುವ ಕುರಿತು ಹಾಗೂ ಅದರ ನಿರ್ವಹಣೆಗೆ ಸಂಬಂಧಿಸಿದಂತೆ ಚರ್ಚಿಸಿದ ಅವರು, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು.
ಎಲ್ಲಿಯೂ ನೀರಿನ ಸಮಸ್ಯೆ ಉದ್ಭವಿಸದಂತೆ ನೋಡಿಕೊಳ್ಳಿ ಎಂದು ಡಿಸಿ ಶರತ್ ಹಾಗೂ ಜಿಪಂ ಸಿಇಒ ನಳಿನಿ ಅತುಲ್ ಅವರಿಗೆ ಖಡಕ್ ಆಗಿ ಎಚ್ಚರಿಸಿದ, ಅವರು ಹಣಕಾಸಿನ ತೊಂದರೆ ಇದ್ದರೆ ಹೇಳಿ ಎಂದರು.
ಬರಗಾಲದ ಸಮರ್ಪಕ ನಿರ್ವಹಣೆಗೆ ಸಂಬಂಧಿಸಿದಂತೆ ಹಣಕಾಸಿನ ಕೊರತೆ ಇಲ್ಲ ಎಂದು ಡಿಸಿ ಶರತ್ ಅವರು ಸಿಎಂ ಅವರಿಗೆ ತಿಳಿಸಿದರು.
ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ ಲೋಕೋಪಯೋಗಿ ಇಲಾಖೆ, ಸಣ್ಣ ನೀರಾವರಿ, ಪಶುಸಂಗೋಪನೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಎಚ್ ಕೆಆರ್ಡಿಬಿ, ಬಿಸಿಎಂ ಇಲಾಖೆಗಳಿಗೆ ಸಂಬಂಧಿಸಿದ 8144.99 ಲಕ್ಷ ರೂ.ಗಳ 38ಕಾಮಗಾರಿಗಳು ಶಂಕುಸ್ಥಾಪನೆ ಮತ್ತು ಉದ್ಘಾಟನೆಯಾಗಲಿವೆ ಎಂದು ಅವರು ತಿಳಿಸಿದರು.
ಸಚಿವರಾದವ ಸಾ.ರಾ.ಮಹೇಶ, ಶಿವಶಂಕರ ರೆಡ್ಡಿ, ವೆಂಕಟರಾವ ನಾಡಗೌಡ, ಶಾಸಕ ರಾಜಾವೆಂಕಟಪ್ಪ ನಾಯಕ್ , ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ಎಚ್.ಬಿ.ದಿನೇಶ್ ಸೇರಿದಂತೆ
ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ, ಜಿಲ್ಲಾಧಿಕಾರಿ ಶರತ್, ಐಜಿಪಿ,ಜಿಪಂ ಸಿಇಒ ಮತ್ತು ಜಿಲ್ಲಾ ರಕ್ಷಣಾಧಿಕಾರಿ ಉಪಸ್ಥಿತರಿದ್ದರು.