ಸಿಎಂ ಯಡಿಯೂರಪ್ಪ ಮತ್ತು ಬಿ.ಎಲ್.ಸಂತೋಷ್ ಮೀಟಿಂಗ್ : ಸಚಿವರ ಪಟ್ಟಿ ಫೈನಲ್
ನವದೆಹಲಿ : ಬಿ.ಎಸ್.ಯಡಿಯೂರಪ್ಪ ಅವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಆಗಿ 15ದಿನಗಳೇ ಕಳೆದಿವೆ. ಆದರೆ, ಈವರೆಗೆ ಸಚಿವ ಸಂಪುಟ ಮಾತ್ರ ರಚನೆ ಆಗಿಲ್ಲ. ಬಿಜೆಪಿ ಹೈಕಮಾಂಡ್ ಗೆ ಸಿಎಂ ಯಡಿಯೂರಪ್ಪ ಅವರು ಒಂದು ಸಂಭಾವ್ಯ ಸಚಿವರ ಪಟ್ಟಿ ನೀಡಿದರೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ ಅವರು ಒಂದು ಪಟ್ಟಿಯನ್ನು ನೀಡಿದ್ದಾರೆ ಎನ್ನಲಾಗುತ್ತಿದೆ. ಕರ್ನಾಟಕದ ಈ ಇಬ್ಬರು ನಾಯಕರ ನಡುವಿನ ಪ್ರತಿಷ್ಠೆಯಿಂದಾಗಿ ಸಚಿವ ಸಂಪುಟ ವಿಸ್ತರಣೆ ವಿಳಂಬ ಆಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.
ಇಂದು ನವದೆಹಲಿಗೆ ಭೇಟಿ ನೀಡಿದ್ದ ಸಿಎಂ ಯಡಿಯೂರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಈ ವೇಳೆ ಪ್ರವಾಹ ಪೀಡಿತ ರಾಜ್ಯಕ್ಕೆ ಶೀಘ್ರ ನೆರವು ನೀಡುವಂತೆ ಮನವಿ ಮಾಡಿದರು. ಅಲ್ಲದೆ ಸಚಿವ ಸಂಪುಟ ವಿಸ್ತರಣೆಗೆ ಒಪ್ಪಿಗೆ ಕೇಳಿದರು ಎನ್ನಲಾಗಿದೆ. ಮೋದಿ ಭೇಟಿ ಬಳಿಕ ಸಿಎಂ ಯಡಿಯೂರಪ್ಪ ಅವರು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನೂ ಭೇಟಿಯಾಗಿ ಅರ್ಧಗಂಟೆ ಕಾಲ ಚರ್ಚೆ ನಡೆಸಿದರು. ಹೀಗಾಗಿ, ಇಬ್ಬರೂ ಸೇರಿ ಸಹಮತಕ್ಕೆ ಬರುವ ಮೂಲಕ ಸಚಿವರ ಪಟ್ಟಿ ಅಂತಿಮಗೊಳಿಸಿದ್ದಾರೆ. ನಾಳೆ ಬಿಜೆಪಿ ಅದ್ಯಕ್ಷ ಅಮಿತ್ ಶಾ ಭೇಟಿ ಮಾಡಿ ನೂತನ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ ಎನ್ನಲಾಗುತ್ತಿದೆ. ಆ ಮೂಲಕ ಬಿ.ಎಸ್. ಯಡಿಯೂರಪ್ಪ ಮತ್ತು ಬಿ.ಎಲ್.ಸಂತೋಷ್ ನಡುವಿನ ಶೀತಲ ಸಮರಕ್ಕೂ ತೆರೆ ಎಳೆಯಲಾಗಿದೆ ಎನ್ನಲಾಗಿದೆ.