ವಿವಿಧ ಅಂಗಡಿಗಳ ಮೇಲೆ ದಾಳಿಃ ನಿಷೇಧಿತ ಪ್ಲಾಸ್ಟಿಕ್, ತಂಬಾಕು ಉತ್ಪನ್ನಗಳ ವಶ
ವಿವಿಧ ಗ್ರಾಮದ ಅಂಗಡಿಗಳ ಮೇಲೆ ಅನಿರೀಕ್ಷಿತ ದಾಳಿ
ಯಾದಗಿರಿಃ ತಾಲ್ಲೂಕಿನ ಹೆಡಗಿಮದ್ರಾ, ಬೊಮ್ಮಚಟ್ನಳ್ಳಿ ಹಾಗೂ ತಳಕ್ ಗ್ರಾಮಗಳ ಸ್ಟಾಲ್, ಮಳಿಗೆ, ಅಂಗಡಿಗಳ ಮೇಲೆ ಮಂಗಳವಾರ ಅನಿರೀಕ್ಷಿತ ದಾಳಿ ನಡೆಸಿದ ಅಧಿಕಾರಿಗಳು ಪ್ಲಾಸ್ಟಿಕ್, ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಬಾಲಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕ ರಘುವೀರಸಿಂಗ್ ಠಾಕೂರ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶ ಮೇರೆಗೆ ದಾಳಿ ನಡೆಸಲಾಗಿದೆ. ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವುದು ಕಾನೂನು ಪ್ರಕಾರ ಅಪರಾಧವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವುದು ನಿಷೇಧಿಸಲಾಗಿದ್ದು, ಉಲ್ಲಂಘಿಸಿದಲ್ಲಿ 25000 ರೂ.ಗಳವರೆಗೆ ದಂಡ ವಿಧಿಸುವುದರ ಜೊತೆಗೆ ಶಿಕ್ಷೆಗೆ ಒಳಪಡಬೇಕಾಗುತ್ತದೆ ಎಂದು ಹೇಳಿದರು.
ಬಾಲಕಾರ್ಮಿಕ ಪದ್ಧತಿ 1986ರ ಕಾಯ್ದೆಯಡಿಯಲ್ಲಿ 6 ರಿಂದ 18 ವರ್ಷದೊಳಗಿನ ಮಕ್ಕಳನ್ನು ಯಾವುದೇ ಅಪಾಯಕಾರಿ ಉದ್ದಿಮೆಗಳಲ್ಲಿ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ. ಅನಿರೀಕ್ಷಿತ ತಪಾಸಣೆ ವೇಳೆ ಪತ್ತೆಯಾದ ಮಕ್ಕಳ ದಾಖಲೆಗಳನ್ನು ವೀಕ್ಷಿಸಿ, ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಸೇರಿಸಲು ಸೂಚಿಸಲಾಗಿದೆ.
ಒಂದು ವೇಳೆ ಕಾನೂನು ಉಲ್ಲಂಘನೆ ಮಾಡಿದಲ್ಲಿ ಮಾಲೀಕರಿಗೆ 50,000 ರೂ. ಗಳ ದಂಡ ವಿಧಿಸಲಾಗುತ್ತದೆ. ಜೊತೆಗೆ ಜೈಲು ವಾಸ ಕೂಡ ವಿಧಿಸಬಹುದು ತಿಳಿಸಿದರು. ಸಾಕಷ್ಟು ಬಾರಿ ಜಾಥಾ ಮೂಲಕ, ಆಟೊ ಪ್ರಚಾರ, ಕರಪತ್ರಗಳ ವಿತರಣೆ, ಕಾನೂನು ಅರಿವು- ನೆರವು ಕಾರ್ಯಕ್ರಮಗಳು ಮತ್ತು ಹಲವಾರು ಬಾರಿ ಅನಿರೀಕ್ಷಿತ ತಪಾಸಣೆ, ದಾಳಿ ಮಾಡಿ ಸಾರ್ವಜನಿಕರಿಗೆ ಹಾಗೂ ಸಬಂಧಿಸಿದ ಅಂಗಡಿ ಮಾಲೀಕರುಗಳಿಗೆ ಮಾಹಿತಿ ನೀಡಿದರೂ ಸಹ ಹಲವಾರು ಅಂಗಡಿ ಮಾಲೀಕರು ನಿಯಮಗಳನ್ನು ಉಲ್ಲಂಘಿಸಿ, ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಬಳಸುತ್ತಿರುವುದು, ಬಹಿರಂಗವಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಹಾಗೂ ಬಾಲಕಾರ್ಮಿಕರನ್ನು ದುಡಿಸಿಕೊಳ್ಳುವುದು ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿ, ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದರು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರರಾದ ಮಹಾಲಕ್ಷ್ಮೀ ಸಜ್ಜನ್ ಅವರು ಮಾತನಾಡಿ, ಕೋಟ್ಪಾ-2003 ಕಾಯ್ದೆಯಡಿಯಲ್ಲಿ ಸೆಕ್ಷನ್ 4, 5, 6, 6ಎ, 6ಬಿ ಮತ್ತು 7ರ ಪ್ರಕಾರ ಸಂಬಂಧಿಸಿದ ಕಾಯ್ದೆಗಳನುಸಾರ ಹೋಟೆಲ್, ರೆಸ್ಟೊರೆಂಟ್, ಬಾರ್, ಧಾಬಾ, ಅಂಗಡಿಗಳಲ್ಲಿ ಮತ್ತು ಶಾಲಾ-ಕಾಲೇಜು ಪ್ರದೇಶದ 100 ಮೀಟರ್ ಅಂತರದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕಿಗೆ ಸಂಬಂಧಿಸಿದ ಉತ್ಪನ್ನಗಳನ್ನು ಬಹಿರಂಗವಾಗಿ ಮಕ್ಕಳಿಂದ ಮಾರುವುದಕ್ಕೆ ಪ್ರಚೋದನೆ ನೀಡುವುದು, ದುಡಿಸಿಕೊಳ್ಳುವುದು ಮತ್ತು ಸೇದುವುದು ಕಾನೂನಿನ ಪ್ರಕಾರ ನಿಷೇಧಿಸಲಾಗಿರುತ್ತದೆ. ನಿಯಮಗಳನ್ನು ಉಲ್ಲಂಘಿಸಿದಲ್ಲಿ ದಂಡ ವಿಧಿಸುವುದರ ಜೊತೆಗೆ ಶಿಕ್ಷೆಗೆ ಒಳಪಡಬೇಕಾಗುತ್ತದೆ ಎಂದು ತಿಳಿವಳಿಕೆ ನೀಡಿದರು.
ದಾಳಿಯಲ್ಲಿ ಅಂಗಡಿಗಳ ಮಾಲೀಕರಿಗೆ ದಂಡ ವಿಧಿಸಲಾಗಿದೆ. ಸೆಕ್ಷೆನ್ 5ರಲ್ಲಿ 6 ನೋಟಿಸು ನೀಡಲಾಗಿರುತ್ತದೆ. ಸೆಕ್ಷೆನ್ 7ರಲ್ಲಿ 3 ನೋಟಿಸು ನೀಡಲಾಗಿರುತ್ತದೆ ಎಂದು ಮಾಹಿತಿ ನೀಡಿದರು. ಕಾರ್ಮಿಕ ಇಲಾಖೆಯ ಚಂದ್ರಶೇಖರ ಬಂದಳ್ಳಿ, ಅಮೃತರಾವ್ ಕೊತ್ವಾಲ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳಾದ ಸಾಬಯ್ಯ ಮತ್ತು ವೆಂಕಟೇಶ ಅವರು ದಾಳಿಯಲ್ಲಿ ಪಾಲ್ಗೊಂಡಿದ್ದರು.