ಮಂತ್ರಿಗಿರಿಗೆ ಮನವಿ : ಮಾಜಿ ಶಾಸಕ ಚಿಂಚನಸೂರ್ ಬೆಂಬಲಿಗರಿಗೆ ಸಿಎಂ ಭರವಸೆ
(ಸಾಂದರ್ಭಿಕ ಚಿತ್ರ)
ಬೆಂಗಳೂರು: ಮಾಜಿ ಶಾಸಕ ಬಾಬುರಾವ್ ಚಿಂಚನಸೂರ್ ಅವರಿಗೆ ವಿಧಾನಪರಿಷತ್ ಸದಸ್ಯರನ್ನಾಗಿಸಿ ಮಂತ್ರಿಗಿರಿ ನೀಡುವಂತೆ ಚಿಂಚನಸೂರ್ ಅವರ ಬೆಂಬಲಿಗರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾಲಿಗೆ ಬಿದ್ದು ಮನವಿ ಮಾಡಿದ್ದಾರೆ. ಬಾಬುರಾವ್ ಚಿಂಚನಸೂರ್ ಅವರ ಭಾವಚಿತ್ರಗಳನ್ನಿಡಿದುಕೊಂಡು ಕಲಬುರಗಿಯಿಂದ ಬೆಂಗಳೂರಿಗೆ ಆಗಮಿಸಿದ್ದ ಚಿಂಚನಸೂರ್ ಬೆಂಬಲಿಗರು ಸಿಎಂ ಯಡಿಯೂರಪ್ಪ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ಪ್ರಮುಖ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಕಲಬುರಗಿಯಲ್ಲಿ ಸೋಲಿಸುವಲ್ಲಿ ಬಾಬುರಾವ್ ಚಿಂಚನಸೂರ ಅವರ ಪಾತ್ರ ಪ್ರಮುಖವಾಗಿದೆ. ಆ ಸಂದರ್ಭದಲ್ಲೇ ಅವರಿಗೆ ಬಿಜೆಪಿ ಸರ್ಕಾರ ಬಂದಾಗ ಉತ್ತಮ ಸ್ಥಾನಮಾನ ನೀಡುವ ಭರವಸೆ ನೀಡಿದ್ದಿರಿ ಎಂದು ಚಿಂಚನಸೂರ್ ಅವರ ಬೆಂಬಲಿಗರು ಸಿಎಂ ಯಡಿಯೂರಪ್ಪ ಅವರಿಗೆ ನೆನಪಿಸಿದರು. ಚಿಂಚನಸೂರ್ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಹೈಕಮಾಂಡ್ ಗಮನಕ್ಕೆ ತಂದು ಚಿಂಚನಸೂರ್ ಅವರಿಗೆ ಸ್ಥಾನಮಾನ ಕೊಡಿಸುವಲ್ಲಿ ನಾನು ಪ್ರಯತ್ನಿಸುತ್ತೇನೆ ಎಂದು ಯಡಿಯೂರಪ್ಪ ಪ್ರತಿಕ್ರಿಯಿಸಿದರು.