ಪ್ರಮುಖ ಸುದ್ದಿ
ಯುಗಾದಿ ಹಬ್ಬದ ಪ್ರಯುಕ್ತ ನಡೆದ ರಥೋತ್ಸವದ ಚಕ್ರಕ್ಕೆ ಸಿಲುಕಿ ಭಕ್ತ ಸಾವು!
ಕಲಬುರಗಿ : ಪ್ರತಿ ವರ್ಷದಂತೆ ಈ ವರ್ಷವೂ ಜಿಲ್ಲೆಯ ಶಹಾಬಾದ್ ತಾಲ್ಲೂಕಿನ ದೇವನ ತೇಗೂರು ಗ್ರಾಮದಲ್ಲಿ ಯುಗಾದಿ ಹಬ್ಬದ ಅಂಗವಾಗಿ ಶಿವಲಿಂಗೇಶ್ವರ ಜಾತ್ರೆ ಮತ್ತು ರಥೋತ್ಸವ ಆಯೋಜಿಸಲಾಗಿತ್ತು. ಅಂದುಕೊಂಡಂತೆ ಆಗಿದ್ದರೆ ಅದ್ಧೂರಿಯ ರಥೋತ್ಸವ ಜರುಗಬೇಕಿತ್ತು. ಸಾವಿರಾರು ಭಕ್ತರ ಜೈಘೋಷಗಳ ನಡುವೆ ಆರಾಧ್ಯ ದೇವರ ರಥ ಸಂಭ್ರಮ ಸಡಗರದಿಂದಲೇ ಸಾಗಿತ್ತು. ಆದರೆ, ತೇರು ಎಳೆಯುವ ಅವಸರ ನಡುವೆ ಅದೇನಾಯ್ತೋ ಗೊತ್ತಿಲ್ಲ. ತರಿ ತಾಂಡಾದ ಭಕ್ತ ಕಿಶನ್ (45) ರಥದ ಚಕ್ರಕ್ಕೆ ಸಿಲುಕಿ ಕೊನೆಯುಸಿರೆಳೆದಿದ್ದಾನೆ.
ದೇವರ ಜಾತ್ರೆ ಮತ್ತು ರಥೋತ್ಸವಕ್ಕೆ ಬಂದಿದ್ದ ಭಕ್ತ ಕಿಶನ್ ಸಾವು ಕುಟುಂಬ ಹಾಗೂ ಭಕ್ತರಲ್ಲಿ ನೋವು ಮೂಡಿಸಿದೆ. ಇಷ್ಟುವರ್ಷಗಳ ಕಾಲ ಸೂಸುತ್ರವಾಗಿ ನಡೆಯುತ್ತಿದ್ದ ಶಿವಲಿಂಗೇಶ್ವರ ರಥೋತ್ಸವದಲ್ಲಿ ಈ ವರ್ಷ ಸಾವು ನೋವು ಸಂಭವಿಸಿರುವುದು ಭಕ್ತರಲ್ಲಿ ಆತಂಕ ಮೂಡಿಸಿದೆ. ಶಹಾಬಾದ್ ಠಾಣೆಯಲ್ಲಿ ಕಿಶನ್ ಸಾವಿನ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.