ಯರಗೋಳಃ ಮುಸ್ಲಿಂ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆ
ಯರಗೋಳದಲ್ಲೂ ಬಕ್ರೀದ್ ಆಚರಣೆ
ಯಾದಗಿರಿ: ತಾಲ್ಲೂಕಿನ ಯರಗೋಳ ಗ್ರಾಮದಲ್ಲಿ ಸೋಮವಾರ ಮುಸ್ಲಿಂ ಬಾಂಧವರು ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಬೆಳಿಗ್ಗೆ ಹಿರಿಯರು ಹಾಗೂ ಕಿರಿಯರು ಹೊಸ ಬಟ್ಟೆಗಳನ್ನು ಧರಿಸಿ ಗ್ರಾಮದ ಸಮೀಪವಿರುವ ಈದ್ಗಾ ಮೈದಾನಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೌಲಾಸಾಬ್, ಪ್ರತಿಯೊಬ್ಬರೂ ಧರ್ಮ ಮಾರ್ಗದಲ್ಲಿ ನಡೆದು ಅಲ್ಲಾಹನ ಕೃಪೆಗೆ ಪಾತ್ರರಾಗಬೇಕು ಎಂದು ಸಂದೇಶ ನೀಡಿದರು. ತ್ಯಾಗ ಬಲಿದಾನ ಕುರಿತು ನಡೆಸುವ ೀ ಹಬ್ಬ ಕುರಿತು ತಿಳಿಸಿಕೊಟ್ಟರು.
ಸಮಾಜದ ಹಿರಿಯರಾದ ಬಂದ್ಗಿಸಾಬ್ ಸೌದಾಗರ್ ಮಾತನಾಡಿ, ಇಸ್ಲಾಮಿನ ರೋಚಕ ಇತಿಹಾಸವನ್ನು ಸ್ಮರಿಸುವ ಹಬ್ಬ ಬಕ್ರೀದ್ ಆಗಿದೆ. ಸುಮಾರು ನಾಲ್ಕು ಸಾವಿರ ವರ್ಷಗಳಿಗೂ ಹಿಂದೆ ಜನಿಸಿದ್ದ ಪ್ರವಾದಿ ಇಬ್ರಾಹಿಂ ಅವರ ತ್ಯಾಗ-ಬಲಿದಾನಗಳ ನೆನಪಿನಲ್ಲಿ ಬಕ್ರೀದ್ ಹಬ್ಬ ಆಚರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ವಿಶೇಷ ಪ್ರಾರ್ಥನೆ ನಂತರದಲ್ಲಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಗ್ರಾಮದ ಮುಸ್ಲಿಂ ಬಾಂಧವರೆಲ್ಲರೂ ಯರಗೋಳ ಗ್ರಾಮದ ಪ್ರಸಿದ್ಧ ಹಜರತ್ ಜಮಾಲೋದ್ದೀನ್ ಸಾಬ್ ದರ್ಗಾಕ್ಕೆ ತೆರಳಿ ನಮನ ಸಲ್ಲಿಸಿದರು. ತದನಂತರ ಪ್ರತಿವರ್ಷದಂತೆ ಗ್ರಾಮದ ಪೊಲೀಸ್ ಠಾಣೆಗೆ ತೆರಳಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಊರಿನ ದಳಪತಿ, ಮುಖಂಡರಿಗೆ ಶುಭಾಶಯ ಕೋರಿದರು.
ಎ.ಎಸ್.ಐ ಶಿವಲಿಂಗಪ್ಪ ಅವರು ಮುಸ್ಲಿಂ ಬಾಂಧವರಿಗೆ ವೀಳ್ಯೆದೆಲೆ ಹಾಗೂ ಅಡಿಕೆ ನೀಡಿ ಶುಭಾಶಯ ಕೋರಿದರು.
ಸಮಾಜದ ಮುಖಂಡರಾದ ಲಾಲ್ ಅಹ್ಮದ್ ಪಾಟಕ್, ಕರೀಂ ಸಾಬ್ ಸೌದಾಗರ್, ಜಮಾಲ್ ಸಾಬ್ (ಡಲ್ಲಿ), ಮೈಬೂಬುಸಾಬ್ ಇನಾಮದಾರ (ಡಲ್ಲಿ), ಹಾಜಿಮೀಯಾ ಮುಸ್ತಾಜೀರ್, ಇಫ್ತೆಕಾರ್ ಅಲಿ ಇನಾಮದಾರ, ಮಲಂಗ್ ಮುಲ್ಲಾ, ಜಮಾಲ್ ಸಾಬ್, ಮುಸ್ತಾಫಾ ಹತ್ತಿಕುಣಿ, ಮೈಬೂಬಪಾಶಾ ಇನಾಮದಾರ, ಉರ್ದು ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ನಬೀಸಾಬ್, ಖದೀರ್ ಪಾಶಾ, ಹುಸೇನ್ ಪಾಶಾ ಟೇಲರ್, ಭಾಷಾಖಾದ್ರಿ ಸೌದಾಗರ್ ಸೇರಿದಂತೆ ಇತರರಿದ್ದರು.