ಸಿರಗುಪ್ಪದಿಂದ ಅನಂತಪುರ ವರ್ತುಲ ರಸ್ತೆ ನಿರ್ಮಾಣ; ಡಿಸಿಯಿಂದ ಅಹವಾಲು ಸ್ವೀಕಾರ
ಸಿರಗುಪ್ಪಾದಿಂದ ಅನಂತಪುರವರೆಗೆ ವರ್ತುಲ ರಸ್ತೆ ನಿರ್ಮಾಣ
ರೈತರ ಅಹವಾಲು ಆಲಿಸಿದ ಜಿಲ್ಲಾಡಳಿತ
ಬಳ್ಳಾರಿಃ ಬಳ್ಳಾರಿ ನಗರಾಬಿವೃದ್ದಿ ಪ್ರಾಧಿಕಾರದ ವತಿಯಿಂದ ಸಿರಗುಪ್ಪಾ ರಸ್ತೆಯಿಂದ ಅನಂತಪುರ ರಸ್ತೆವರೆಗೆ ನಿರ್ಮಿಸಲು ಉದ್ದೇಶಿಸಿ ಸಮೀಕ್ಷೆ ನಡೆಸಿದ ವರ್ತುಲ ರಸ್ತೆಗೆ ಸಂಬಂಧಿಸಿದಂತೆ ಜಮೀನು ಕಳೆದುಕೊಳ್ಳಲಿರುವ ರೈತರ ಅಹವಾಲುಗಳನ್ನು ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಮಂಗಳವಾರ ಆಲಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ರೈತರೊಂದಿಗೆ ಅಹವಾಲು ಆಲಿಕೆ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಬಳ್ಳಾರಿ, ಬಿಸಲಹಳ್ಳಿ, ಹದ್ದಿನಗುಂಡು, ಸಂಗನಕಲ್ಲು ಗ್ರಾಮಗಳ ರೈತರ ಅಹವಾಲುಗಳನ್ನು ಆಲಿಸಿದರು ಮತ್ತು ಬಳ್ಳಾರಿ ನಗರದ ಅಭಿವೃದ್ಧಿಗೆ ಕೈಜೋಡಿಸುವಂತೆ ಈ ಸಂದರ್ಭದಲ್ಲಿ ಅವರು ಮನವಿ ಮಾಡಿದರು.
ಸಿರಗುಪ್ಪಾ ರಸ್ತೆಯಿಂದ ಅನಂತಪುರ ರಸ್ತೆಯವರೆಗಿನ 9.66ಕಿ.ಮೀ ವರೆಗೆ ವರ್ತುಲ ರಸ್ತೆ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಮೀಕ್ಷೆ ನಡೆಸಲಾಗಿದೆ. ಇದಕ್ಕೆ 22ರಿಂದ 24 ಕೋಟಿ ರೂ.ವರೆಗೆ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ಈ ವರ್ತುಲ ರಸ್ತೆಗೆ ಜಮೀನು ಬಳಸಿಕೊಳ್ಳುವ ರೈತರಿಗೆ ಅವರ ಉಳಿದ ಜಮೀನಿನನ್ನು ಮತ್ತು ಅಲ್ಲಿನ ಪರಿಸ್ಥಿತಿ ಪರಿಗಣಿಸಿ ಮತ್ತು ಪರಿಶೀಲಿಸಿ ಕೃಷಿಯೇತರ ಜಮೀನನ್ನಾಗಿ ಪರಿವರ್ತಿಸಿಕೊಡಲಾಗುವುದು, ಸಾರ್ವಜನಿಕರಿಗೆ ಉಪಯೋಗವಾಗುವ ಯೋಜನೆ ಇದಾಗಿರುವುದರಿಂದ ಇದಕ್ಕೆ ಜಾಗ ಬಿಟ್ಟುಕೊಡುವ ರೈತರಿಗೆ ಯಾವುದೇ ರೀತಿಯ ಪರಿಹಾರ ನೀಡಲಾಗುವುದಿಲ್ಲ ಎಂದು ಅವರು ಹೇಳಿದರು.
ಈ ವರ್ತುಲ ರಸ್ತೆಗಾಗಿ ಜಮೀನು ಕಳೆದುಕೊಳ್ಳಲಿರುವ ಸಂಗನಕಲ್ಲು, ಬಿಸಲಹಳ್ಳಿ, ಹದ್ದಿನಗುಂಡು ಮತ್ತು ಬಳ್ಳಾರಿಯ ರೈತರ ಅಹವಾಲು, ಮನವಿ, ಆಕ್ಷೇಪಣೆಗಳನ್ನು ಅಹವಾಲಿಸಿದ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಅವರು, ತಮ್ಮ ಅಹವಾಲುಗಳನ್ನು ಆಲಿಸಿ ನೋಟ್ ಮಾಡಿಕೊಳ್ಳಲಾಗಿದ್ದು, ಸ್ಥಳಕ್ಕೆ ಬಂದು ಪರಿಶೀಲಿಸಿ ಸಾರ್ವಜನಿಕ ಹಿತದೃಷ್ಟಿಯನ್ನಿಟ್ಟುಕೊಂಡು ಅಗತ್ಯಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ, ಬುಡಾ ಅಧ್ಯಕ್ಷ ಅಂಜನೇಯಲು, ಬಳ್ಳಾರಿ ಉಪವಿಭಾಗಾಧಿಕಾರಿ ಕುಮಾರಸ್ವಾಮಿ ಮತ್ತು ಬುಡಾ ಆಯುಕ್ತ ಜಹೀರ್‍ಅಬ್ಬಾಸ್ ಮತ್ತಿತರರು ಇದ್ದರು. ಸಭೆಯಲ್ಲಿ ಇನ್ನೂರಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು.