ಬೆಂಗಳೂರು: ಕುಕ್ಕರ್ ಸ್ಫೋಟ; ಓರ್ವ ಸಾವು, ಮತ್ತೋರ್ವನಿಗೆ ಗಾಯ

ಬೆಂಗಳೂರು: ಬೆಂಗಳೂರಿನ ಜೆಪಿ ನಗರದ ಪುಟ್ಟೇನಹಳ್ಳಿಯ ಮನೆಯೊಂದರಲ್ಲಿ ಕುಕ್ಕರ್ ಸ್ಫೋಟಗೊಂಡ ಪರಿಣಾಮ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಮಂಗಳವಾರ ಅಡುಗೆ ಮಾಡಲು ಗ್ಯಾಸ್ ಸ್ಟೌವ್ ಮೇಲೆ ಕುಕ್ಕರ್ ಇಟ್ಟು ಇಬ್ಬರು ಯುವಕರು ಮಲಗಿದ್ದಾರೆ. ಈ ವೇಳೆ ಕುಕ್ಕರ್ ಹೀಟ್ ಹೆಚ್ಚಾಗಿ ಸ್ಫೋಟಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೋಸಿನ್ ಚಿಕಿತ್ಸೆ ಫಲಕಾರಿಯಾಗದೆ ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸಮೀರ್ಗೆ ಚಿಕಿತ್ಸೆ ಮುಂದುವರೆದಿದೆ.
ಈ ಸ್ಫೋಟ ಕೂಡ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟ ಮಾದರಿಯಲ್ಲೇ ನಡೆದಿದೆ ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಅನುಮಾನಾಸ್ಪದವಾಗಿ (ಸ್ಫೋಟಕಗಳನ್ನು ಬಳಸಿರುವ ಬಗ್ಗೆ ಯಾವ ಸಾಕ್ಷಿಗಳು ಪತ್ತೆಯಾಗಿಲ್ಲ) ಏನೂ ಪತ್ತೆಯಾಗಿಲ್ಲ ಮತ್ತು ಇದು ಕೇವಲ ಅಡುಗೆ ಅವಘಡವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಎಲ್ಲಾ ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಯಿತು ಮತ್ತು ವಿವರವಾದ ತನಿಖೆ ನಡೆಸಲಾಗಿದೆ. ಯಾವುದೇ ರಾಸಾಯನಿಕ ಅಥವಾ ಯಾವುದೇ ಅನುಮಾನಾಸ್ಪದ ವಸ್ತು ಕಂಡುಬಂದಿಲ್ಲ. ಇದು ಅಡುಗೆ ಅವಘಡದ ಘಟನೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.