ಜಗದ್ಗುರುಗಳ ಸಾನಿಧ್ಯದಲ್ಲಿ ಜಗಜ್ಯೋತಿ ಬಸವ ಪ್ರತಿಮೆ ಅನಾವರಣ
ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಬಸವಣ್ಣನ ಹೆಸರಿಡಿ – ಆಡಿಸಿದ್ದೇಶ್ವರ ಮಠದ ಶಿವಾನಂದ ಸ್ವಾಮೀಜಿ
ಶಹಾಪುರಃ ನಗರದ ಬಸವೇಶ್ವರ ವೃತ್ತದಲ್ಲಿ ಇಂದು ನೂತನ ಬಸವ ಪ್ರತಿಮೆ ಅನಾವರಣಗೊಳಿಸಲಾಯಿತು. ನೆನೆಗುದಿಗೆ ಬಿದ್ದಿದ್ದ ಬಸವ ಪ್ರತಿಮೆ ಸ್ಥಾಪನೆ ಇತ್ತೀಚೆಗಷ್ಟೇ ಕಾರ್ಯಗತವಾಗಿತ್ತು. ಹೀಗಾಗಿ, ಇಂದು ಜಗದ್ಗುರುಗಳ ಸಾನಿಧ್ಯದಲ್ಲಿ, ಬಸವಾಭಿಮಾನಿಗಳ ಸಮ್ಮುಖದಲ್ಲಿ ನೂತನ ಬಸವ ಪ್ರತಿಮೆ ಅನಾವರಣಗೊಂಡಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಹಂದಿಗುಂದ ಆಡಿಸಿದ್ದೇಶ್ವರ ಮಠದ ಶಿವಾನಂದ ಸ್ವಾಮೀಜಿ ಲಂಡನ್ ನ ಪಾರ್ಲಿಮೆಂಟ್ ಬಳಿ ಪ್ರಧಾನಿ ನರೇಂದ್ರ ಮೋದಿ ಅವರು ಬಸವ ಮೂರ್ತಿ ಅನಾವರಣಗೊಳಿಸಿದ್ದರು. ಪ್ರಧಾನಿಯಾಗಿ ಲಂಡನ್ ನಲ್ಲಿ ಬಸವ ಪ್ರತಿಮೆ ಅನಾವರಣಗೊಳಿಸಿದ್ದಕ್ಕೆ ಹೆಮ್ಮೆಯಿದೆ ಎಂದಿದ್ದರು.
ಜಾಗತೀಕರಣದ ಪ್ರಭಾವದಿಂದ ಭಾಷೆಗಳು ಅಳಿವಿನಂಚಿನಲ್ಲಿವೆ. ಮುಂದಿನ ದಿನಗಳಲ್ಲಿ ಕೇವಲ 60 ಭಾಷೆಗಳು ಮಾತ್ರ ಉಳಿಯಲಿವೆ. ಆ ಪೈಕಿ ಕನ್ನಡ ಭಾಷೆ ಉಳಿಯುತ್ತದೆಂಬುದು ಸಾಹಿತ್ಯ ದಿಗ್ಗಜರ ಮಾತಾಗಿದ್ದು ಬಸವಾದಿ ಶರಣರ ವಚನ ಸಾಹಿತ್ಯದಿಂದಾಗಿ ಕನ್ನಡ ಭಾಷೆ ಉಳಿಯಲಿದೆ ಎಂಬುದು ಹೆಮ್ಮೆಯ ವಿಷಯ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಸರ್ಕಾರಕ್ಕೆ ಬಸವಣ್ಣನ ಬಗ್ಗೆ ನಿಜವಾದ ಅಭಿಮಾನವಿದ್ದರೆ ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಬಸವಣ್ಣನ ಹೆಸರಿಡಲಿ ಎಂದು ಆಗ್ರಹಿಸಿದರು.
ರಂಭಾಪುರಿ, ಶ್ರೀಶೈಲ, ಕಾಶಿ ಪೀಠದ ಜಗದ್ಗುರುಗಳು, ಹಂಪಿ ಹೇಮಕೂಟ ಕೊಟ್ಟೂರೇಶ್ವರ ಮಠದ ಶ್ರೀ ಮತ್ತು ದಿಂಗಾಲೇಶ್ವರ ಶ್ರೀ, ಶಿರಹಟ್ಟಿ ಫಕೀರ ಸಿದ್ಧರಾಮ ಶ್ರೀ, ಹಂದಿಗುಂದ ಸಿದ್ಧೇಶ್ವರ ಮಠದ ಶಿವಾನಂದ ಶ್ರೀಗಳು ಮಾತನಾಡಿದರು. ಸ್ಥಳೀಯ ವಿರಕ್ತ ಮಠದ ಎಲ್ಲಾ ಶ್ರೀಗಳು ಉಪಸ್ಥಿತರಿದ್ದರು.
ಮಾಜಿ ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರ, ಶಾಸಕ ಗುರು ಪಾಟೀಲ ಶಿರವಾಳ, ಬಸವರಾಜೇಂದ್ರ ದೇಶಮುಖ, ಮಲ್ಲಣ್ಣ ಮಡ್ಡಿ ಸಾಹು, ಚಂದ್ರಶೇಖರ ಆರಬೋಳ, ಪರ್ವತರಡ್ಡಿ ಪಾಟೀಲ್, ಸಿದ್ಧಲಿಂಗಪ್ಪ ಆನೇಗುಂದಿ, ಸುರೇಂದ್ರ ಪಾಟೀಲ್ ಮಡ್ನಾಳ ಸೇರಿದಂತೆ ಯುವ ಮುಖಂಡರಾದ ಸುಧೀರ ಚಿಂಚೋಳಿ, ಗುರು ಕಾಮಾ, ಮಲ್ಲಿಕಾರ್ಜುನ ಬುಕಿಸ್ಟಗಾರ, ರವಿ ಮೋಟಗಿ ಇತರರಿದ್ದರು. ಡಾ.ಬಸವರಾಜ ಇಜೇರಿ ನಿರೂಪಿಸಿದರು. ಗುರು ಕಾಮಾ ವಂದಿಸಿದರು.