ಮಣ್ಣಿನ ಗಣೇಶನಿಗಾಗಿ ಪತಂಜಲಿ ಮಳಿಗೆಯತ್ತ ಜನರ ಚಿತ್ತ
ಪರಿಸರ ಸ್ನೇಹಿ ಗಣೇಶನತ್ತ ಜನರ ಚಿತ್ತ
ಮಲ್ಲಿಕಾರ್ಜುನ ಮುದ್ನೂರ
ಶಹಾಪುರಃ ನಗರದಲ್ಲಿ ಇದೇ ಮೊದಲ ಬಾರಿಗೆ ಮಣ್ಣಿನ ಗಣೇಶನ ಮೂರ್ತಿಗಳು ಕಾಲಿಟ್ಟಿದ್ದು, ಸಾರ್ವಜನಿಕರು ಈ ಬಾರಿ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳ ಖರೀದಿಗೆ ಮುಂದಾಗಿದ್ದಾರೆ.
ಪ್ರತಿ ವರ್ಷ ಗಣೇಶನ ಹಬ್ಬಕ್ಕೆ ಪಿಓಪಿ ಗಣೇಶನ ಮೂರ್ತಿಗಳದ್ದೆ ದರ್ಬಾರ ಇರುತಿತ್ತು. ಈ ಬಾರಿ ಜಿಲ್ಲಾಡಳಿತ ಕೈಗೊಂಡ ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪನೆ ಬಗ್ಗೆ ಜನರು ಮನಗಂಡಿದ್ದು, ಪಟ್ಟಣದ ದೇವಿ ನಗರ ಸಿಬಿ ಕಮಾನ ಹತ್ತಿರದ ಪತಂಜಲಿ ಅಂಗಡಿಯಲ್ಲಿ ಮಾರಟಕ್ಕಿರುವ ಮಣ್ಣಿನ ಗಣೇಶನ ಮೂರ್ತಿಗಳಿಗೆ ಜಾಸ್ತಿ ಬೇಡಿಕೆ ಉಂಟಾಗಿದೆ.
ಇಲ್ಲಿನ ಪತಂಜಲಿ ಅಂಗಡಿಗೆ ಕಳೆದ ಮೂರು ದಿನಗಳಿಂದಲೇ ಜನ ಅಡ್ವಾನ್ಸ್ ನೀಡಿ ಮಣ್ಣಿನ ಗಣೇಶ ಖರೀದಿಸಿದ್ದಾರೆ. ರವಿವಾರವು ಸಾಕಷ್ಟು ಜನರು ಮಣ್ಣಿನ ಗಣೇಶ ಮೂರ್ತಿಯತ್ತ ಚಿತ್ತವಿಟ್ಟಿದ್ದರು.
ಆದರೆ ನಗರದಲ್ಲಿ ಪ್ರತಿಷ್ಠಾಪಿಸಲಾಗುವ ಗಣೇಶೋತ್ಸವ ಮಂಡಳಿಗಳು ಮಾತ್ರ ಪಿಓಪಿ ಗಣೇಶ ಮೂರ್ತಿಗಳಿಗೆ ಮೊರೆ ಹೋಗಿರುವದು ಕಂಡು ಬಂದಿದೆ.
ನಗರದ ಮನೆಗಳಲ್ಲಿ ಪೂಜಿಸುವ ಜನರು ಮಣ್ಣಿನ ಗಣೇಶನನ್ನು ಖರೀದಿಸುವದು ಎಲ್ಲೆಡೆ ಕಂಡು ಬಂದಿತು. ಪರಿಸರ ಮಾಲಿನ್ಯ ತಡೆಗಟ್ಟುವ ವಿಚಾರದಲ್ಲಿ ಪಿಓಪಿ ಮತ್ತು ಮಣ್ಣಿನ ಮೂರ್ತಿಗಳ ಕುರಿತು ಸಾಕಷ್ಟು ಜಾಗೃತಿ ಮೂಡಿರುವದರಿಂದ ಪತಂಜಲಿ ಉತ್ನನ್ನ ಮಳಿಗೆಯಲ್ಲಿ ಕೆಂಪು ಜೇಡಿ ಮಣ್ಣಿನಿಂದ ಮಾಡಿದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಜನರು ಖರೀದಿಸುತ್ತಿದ್ದಾರೆ.
ಸುಮಾರು 350 ರಿಂದ 2000 ರು.ವರೆಗೂ ಪತಂಜಲಿ ಮಳಿಗೆಯಲ್ಲಿ ಮಣ್ಣಿನ ಗಣಪನ ಮೂರ್ತಿಗಳು ಜನರಿಗೆ ಸುಲಭವಾಗಿ ದೊರೆಯುತ್ತಿರುವದರಿಂದ ಜನರಿಗೆ ಅನುಕೂಲವಾಗಿದೆ.
ಪರಿಸರ ಸ್ನೇಹಿ ಗಣೇಶನ ಮೂರ್ತಿಯನ್ನು ಬಳಸಬೇಕೆಂದು ಎಲ್ಲಡೆ ಜಾಗೃತಿ ಮೂಡಿಸಲಾಗುತಿತ್ತು. ಆದರೆ ಮಣ್ಣಿನ ಗಣೇಶ ದೊರೆಯುವದು ಸುಲಭವಾಗಿರಲಿಲ್ಲ. ಈ ಬಾರಿ ಪತಂಜಲಿ ಉತ್ಪನ್ನ ಮಳಿಗೆಯಲ್ಲಿ ಪರಿಸರ ಸ್ನೇಹಿ ಮಣ್ಣಿನ ಗಣೇಶನ ಮೂರ್ತಿಗಳು ತಯಾರಿಸಿ ಮಾರಾಟ ಮಾಡುತ್ತಿರುವದು ಜನರಿಗೆ ಅನುಕೂಲವಾಗಿದೆ.
-ರಮೇಶ ನಗನೂರ. ಪರಿಸರ ಸ್ನೇಹಿ ಗಣೇಶ ಖರೀದಿದಾರ.
ಪರಿಸರ ಕಾಳಜಿ ಗಣೇಶನ ಪೂಜಿಸುವ ಭಕ್ತರಲ್ಲೂ ಮತ್ತು ಅದನ್ನು ತಯಾರಿಸುವ ಮಾರಾಟ ಮಾಡುವ ವರ್ತಕರಲ್ಲೂ ಬರಬೇಕು. ಅಂದಾಗ ಮಣ್ಣಿನ ಮೂರ್ತಿಗಳಿಗೆ ಬೇಡಿಕೆ ಜಾಸ್ತಿಯಾಗಲಿದೆ. ಈ ಬಾರಿ ನಗರದಲ್ಲಿ ಸಾಕಷ್ಟು ಜನರು ಮಳಿಗೆಗೆ ಬಂದು ಮಣ್ಣಿನ ಗಣೇಶನ ಮೂರ್ತಿ ಖರೀದಿಸಿದ್ದಾರೆ. ಇದು ಉತ್ತಮ ಬೆಳವಣಿಗೆ.
–ಬಸವರಾಜ ಕಡಗಂಚಿ. ಪತಂಜಲಿ ಯೋಗ ಶಿಕ್ಷಕ.