ಸಗರಃ ಬೀರಲಿಂಗೇಶ್ವರರ ಸಂಭ್ರಮದ ಪಲ್ಲಕ್ಕಿ ಉತ್ಸವ
ಗ್ರಾಮದಲ್ಲಿ ಸಂಭ್ರಮದ ಪಲ್ಲಕ್ಕಿ ಮೆರವಣಿಗೆ
ಯಾದಗಿರಿ, ಶಹಾಪುರಃ ತಾಲೂಕಿನ ಸಗರ ಗ್ರಾಮದಲ್ಲಿ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ರವಿವಾರ ಬೀರಲಿಂಗೇಶ್ವರ ಉತ್ಸವ ಮೂರ್ತಿ ಹೊತ್ತ ಪಲ್ಲಕ್ಕಿ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಸಂಭ್ರಮದ ಮೆರವಣಿಗೆ ಜರುಗಿತು.
ಬೆಳಗ್ಗೆ ಗ್ರಾಮದ ಹೊರವಲಯದಲ್ಲಿರುವ ಜಕ್ಕಂ ಬಾವಿಯಲ್ಲಿ ಗಂಗಾ ಸ್ನಾನ ಮುಗಿಸಿಕೊಂಡು ಗ್ರಾಮ ಪ್ರವೇಶಿಸುವ ಮೂಲಕ ಸಂಭ್ರಮದ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ಸದ್ಭಕ್ತರು ಹೂವಿನ ಹಾರ, ಕಾಯಿ ಕರ್ಪೂರ ಸಲ್ಲಿಸುವ ಮೂಲಕ ದಿವ್ಯ ದರ್ಶನ ಪಡೆದರು.
ಪಲ್ಲಕ್ಕಿ ಮುಂದೆ ಕುಂಭ ಕಳಸ, ಡೊಳ್ಳು ವಾದ್ಯಗಳ ನಾದ ಭಕ್ತರಲ್ಲಿ ಭಕಲ್ತಿ ಪರಕಾಷ್ಠೆ ಮೂಡಿಸಿತ್ತು. ರಾತ್ರಿ 8 ಗಂಟೆಗೆ ಮೂಲ ದೇವಸ್ಥಾನ ತಲುಪಿದ ಪಲ್ಲಕ್ಕಿ, ಪೀಠ ಅಲಂಕರಿಸಿತು. ಈ ಸಂದರ್ಭದಲ್ಲಿ ಭಕ್ತಾಧಿಗಳಿಗೆ ಪ್ರಸಾದ ವ್ಯವಸ್ಥೆಯೂ ಮಾಡಲಾಗಿತ್ತು.
ಅಲ್ಲದೆ ರವಿವಾರ ರಾತ್ರಿಯಿಂದ ಬೆಳಗಿನ ಜಾವದವರೆಗೆ ಡೊಳ್ಳು ಕುಣಿತ ನಡೆಯಲಿದ್ದು, ಸಾರ್ವಜನಿಕರು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ಸೊಮವಾರ ಬೆಳಗ್ಗೆ ಕುಸ್ತಿ, ಭಾರ ಎತ್ತುವ ಸ್ಪರ್ಧೆಗಳು ನಡೆಯಲಿದೆ.
ವಿಜೇತ ಪಟುಗಳಿಗೆ ಬೆಳ್ಳಿ ಕಡಗ ಬಹುಮಾನವಾಗಿ ನೀಡಲಿದ್ದೇವೆ ಎಂದು ಬೀರಲಿಂಗೇಶ್ವರ ದೇವಸ್ಥಾನದ ಅರ್ಚಕ ಚಂದ್ರಾಮಪ್ಪ ಪೂಜಾರಿ ತಿಳಿಸಿದ್ದಾರೆ. ಉತ್ಸವದಲ್ಲಿ ಗ್ರಾಮಸ್ಥರು ಸೇರಿದಂತೆ ಸುತ್ತಲಿನ ಗ್ರಾಮಗಳ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಧಿಗಳು ಭಾಗವಹಿಸಿ ಶ್ರೀದೇವರ ದರ್ಶನ ಪಡೆದು ಪುನೀತಭಾವ ವ್ಯಕ್ತಪಡಿಸಿದರು.