ಶಹಾಪುರಃ ಅನಗತ್ಯ ಶಾಲಾ ಕೋಣೆ ನಿರ್ಮಾಣ ಬೇಡ
ಅಗತ್ಯತೆಗೆ ಆದ್ಯತೆ ನೀಡಲಿ ಕನ್ನಡಪರ ಸಂಘಟನೆಗಳಿಂದ ಆಗ್ರಹ
ಶಹಾಪುರ: ಅನಗತ್ಯ ಶಾಲಾ ಕೋಣೆ ನಿರ್ಮಾಣ ಮಾಡುವುದು ಸರಿಯಲ್ಲ. ಅಗತ್ಯತೆ ಇದ್ದಲ್ಲಿ ಕೋಣೆಗಳ ನಿರ್ಮಾಣ ಮಾಡಲಿ ಎಂದು ಇಲ್ಲಿನ ಕನ್ನಡ ಪರ ಸಂಘಟನೆಗಳು ಶಾಲಾ ಕೋಣೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದು ಕೂಡಲೇ ಕೋಣೆ ನಿರ್ಮಾಣ ಕೈ ಬಿಡಬೇಕೆಂದು ಆಗ್ರಹಿಸಿವೆ.
ಸಮೀಪದ ಭೀಮರಾಯನ ಗುಡಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಬಾರ್ಡ್ ಯೋಜನೆಯಡಿಯಲ್ಲಿ ಐದು ಕೋಣೆಗಳ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಕೂಡಲೇ ಇದು ನಿಲ್ಲಿಸಬೇಕು. ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಕೂಡಲು ಜಾಗವು ಇಲ್ಲದೆ ಗಿಡದ ನೆರಳಲ್ಲಿ ವಿದ್ಯಾಭ್ಯಾಸ ನಡೆದಿವೆ. ಅಂತಹ ಸ್ಥಳಗಳಲ್ಲಿ ಶಾಲಾ ಕೋಣೆಗಳು ನಿರ್ಮಾಣ ಮಾಡುವ ಮೂಲಕ ಸರ್ಕಾರಿ ಯೋಜನೆ ಸದುಪಯೋಗವಾಗಲಿ, ಈಗಾಗಲೇ ಬೀ.ಗುಡಿಯಲ್ಲಿ ಸಾಕಷ್ಟು ಕೋಣೆಗಳು ಖಾಲಿ ಬಿದ್ದಿವೆ.
ಕೇವಲ ಪರೀಕ್ಷೆ ಸಂದರ್ಭದಲ್ಲಿ ಮಾತ್ರ ಅವುಗಳನ್ನು ಬಳಕೆ ಮಾಡಲಾಗುತ್ತಿದೆ. ಅಲ್ಲದೆ ಕಾಲೇಜು ಮೈದಾನ ತುಂಬಾ ಶಾಲಾ ಕೋಣೆಗಳು ನಿರ್ಮಾಣವಾದಲ್ಲಿ ಕಾಲೇಜು ವಾತಾವರಣವು ಹಾಳಾಗುತ್ತದೆ. ವಿದ್ಯಾರ್ಥಿಗಳಿಗೆ ಸಮರ್ಪಕ ಮೈದಾನದ ಕೊರತೆಯು ಉಂಟಾಗಲಿದೆ. ಈಗಾಗಲೇ ಮೈದಾನದ ತುಂಬಾ ಶಾಲಾ ಕೋಣೆಗಳೇ ನಿರ್ಮಾಣವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಬಾರ್ಡ ಯೋಜನೆಯಿಂದ ಶಾಲಾ ಕೋಣೆ ನಿರ್ಮಾಣಕ್ಕೆ ಅನುದಾನ ಬಂದಿದೆ ಎಂದ ಮಾತ್ರಕ್ಕೆ ಎಲ್ಲಿ ಬೇಕೋ ಅಲ್ಲಿ ಶಾಲಾ ಕಟ್ಟಡ ಕಟ್ಟಿ ಲಾಭ ಪಡೆಯುವ ಉದ್ದೇಶ ಸರಿಯಲ್ಲ. ಕ್ಷೇತ್ರದ ಹಲವಡೆ ಕೋಣೆಗಳಿಲ್ಲದೆ ಮಕ್ಕಳು, ಶಿಕ್ಷಕರು ಬಿಸಿಲು, ಮಳೆ ಗಾಳಿ ಚಳಿ ಎನ್ನದೆ ಪರದಾಡುತ್ತಿದ್ದಾರೆ. ಅಂತ ಅಗತ್ಯತೆ ಇದ್ದಲ್ಲಿ ಕೋಣೆ ನಿರ್ಮಿಸುವ ಮೂಲಕ ಸೌಲಭ್ಯ ಕಲ್ಪಿಸಲಿ ಎಂದು ಕನ್ನಡಪರ ಸಂಘಟನೆಗಳು ಮನವಿ ಮಾಡಿವೆ.
ಅಲ್ಲದೆ ಕೃಷ್ಣಾ ಭಾಗ್ಯ ಜಲ ನಿಗಮವು ಶಾಲಾ ಕೋಣೆ ನಿರ್ಮಾಣ ವಿಚಾರದಲ್ಲಿ ಆಕೇಪ ವ್ಯಕ್ತಪಡಿಸಿದ್ದು ಅಲ್ಲದೆ ಸಂಬಂಧಿಸಿದ ಕಾಲೇಜು ಪ್ರಾಂಶುಪಾಲರಿಗೆ ನೋಟಿಸ್ ನೀಡಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಕೂಡಲೇ ಶಾಲಾ ಕೋಣೆ ನಿರ್ಮಾಣ ಯೋಜನೆ ಬೇರಡೆ ಅಗತ್ಯವಿದ್ದಲ್ಲಿಗೆ ಸ್ಥಳಾಂತರಿಸಬೇಕೆಂದು ಕನ್ನಡಪರ ಸಂಘಟನೆಯ ಮುಖಂಡರಾದ ಭೀಮಣ್ಣ ಶಖಾಪುರ, ದೇವು ಭೀ.ಗುಡಿ, ವೆಂಕಟೇಶ ಬೋನೇರ, ಮಲ್ಲಿಕಾರ್ಜುನ ನಗನೂರ ಸೇರಿದಂತೆ ಇತರರು ಆಗ್ರಹಿಸಿದ್ದಾರೆ.