ಪಾತಕಿ ಬಾಗಪ್ಪ ಹರಿಜನ ಮೇಲೆ ಗುಂಡಿನ ದಾಳಿ ಪ್ರಕರಣ: 6ಜನ ಬಂಧನ
ವಿಜಯಪುರ: ಆಗಷ್ಟ 8ರಂದು ನ್ಯಾಯಾಲಯಕ್ಕೆ ಹಾಜರಾದ ವೇಳೆ ಪಾತಕಿ ಭಾಗಪ್ಪ ಹರಿಜನ ಮೇಲೆ ಗುಂಡಿನ ದಾಳಿ ನಡೆದಿತ್ತು. ಭಾಗಪ್ಪನ ಮೇಲೆ ಗುಂಡಿನ ದಾಳಿ ಬಳಿಕ ಆರೋಪಿಗಳು ಎಸ್ಕೇಪ್ ಆಗಿದ್ದರು. ತೀವ್ರ ಗಾಯಗೊಂಡಿದ್ದ ಭಾಗಪ್ಪ ಹರಿಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನ್ಯಾಯಾಲಯದ ಆವರಣದಲ್ಲಿ ನಡೆದ ಶೂಟೌಟ್ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದರು.
ಆರೋಪಿಗಳ ಬಂಧನಕ್ಕಾಗಿ ವಿಶೇಷ ತಂಡ ರಚಿಸಲಾಗಿತ್ತು. ಹೀಗಾಗಿ, ಪೊಲೀಸರು ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಭೀಮಾತೀರದ ಹಂತಕರ ಗುಂಪಿನವರೇ ಗುಂಡಿನ ದಾಳಿ ಮೂಲಕ ಕೊಲೆ ಯತ್ನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಕೊಲೆಯತ್ನ ಆರೋಪಿಗಳಾದ ಭೀಮಶ್ಯಾ ಹರಿಜನ, ರಮೇಶ ಹಡಪದ್, ರಜಾಕ್ ಕಾಂಬಳೆ, ನಾಮದೇವ, ಪ್ರಭು ಜಮಾದಾರ್, ಮಲ್ಲೇಶ್ ಬಿಂಜಗೇರಿ ಇವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 6 ಮೊಬೈಲ್, 1ಸ್ಕಾರ್ಪಿಯೋ ವಾಹನ ವಶಕ್ಕೆ ಪಡೆಯಲಾಗಿದೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಶಿವಕುಮಾರ್ ಗುಣಾರೆ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೂ ಮೂವರು ಆರೋಪಿಗಳು ಹಾಗೂ ಕೃತ್ಯಕ್ಕೆ ಬಳಸಿದ ವೆಪನ್ಸ್ ವಶಕ್ಕೆ ಪಡೆಯಲು ಶೋಧ ಕಾರ್ಯ ಮುಂದುವರೆದಿದೆ ಎಂದು ಎಸ್ಪಿ ಕುಲದೀಪ್ ಜೈನ್ ತಿಳಿಸಿದ್ದಾರೆ.