ಮಗುವಿನ ಆರೋಗ್ಯ ಕ್ಷಮತೆಗೆ ಲಸಿಕೆ ಅಗತ್ಯ-ದರ್ಶನಾಪುರ
ಯಾದಗಿರಿಃ ಸರ್ವರಿಗೂ ಆರೋಗ್ಯ ಭಾಗ್ಯ ದೊರಕುವುದು ಸರ್ಕಾರದ ಮಹತ್ವಾಕಾಂಕ್ಷೆಯಾಗಿದ್ದು ಈ ದಿಸೆಯಲ್ಲಿ ಪ್ರತಿಯೊಂದು ಮಗುವಿನ ಆರೋಗ್ಯ ಕ್ಷಮತೆಗೆ ಇಂದ್ರ ಧನುಷ್ ಲಸಿಕೆ ಕಡ್ಡಾಯವಾಗಿ ಕೊಡಿಸುವುದು ಪಾಲಕರ ಗುರುತರ ಜವಾಬ್ದಾರಿಯಾಗಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ಜಿಲ್ಲೆಯ ಶಹಾಪುರ ನಗರದ ಕುಂಬಾರ ಓಣಿಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ಗ್ರಾಮ ಸ್ವರಾಜ್ಯ ಅಭಿಯಾನದ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರತಿಯೊಂದು ಯೋಜನೆಗಳನ್ನು ಸದುಪಯೋಗ ಪಡೆದು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಸರ್ವರು ಸಹಕರಿಸಬೇಕು ಎಂದರು.
ತಾಲೂಕಾ ಆರೋಗ್ಯಾಧಿಕಾರಿ ಡಾ.ರಮೇಶ ಗುತ್ತೇದಾರ ಮಾತನಾಡಿ, ಇಂದ್ರ ಧನುಷ್ ಅಭಿಯಾನದಡಿಯಲ್ಲಿ ಎರಡು ವರ್ಷದ ಒಳಗಿನ ಮಕ್ಕಳಿಗೆ ಬಿಸಿಜಿ, ಪೋಲಿಯೋ, ದಡಾರ ಮತ್ತು ರುಬೆಲ್ಲಾ ಪ್ರತ್ಯೇಕ ಲಸಿಕೆ ಐದು ವರ್ಷದಿಂದ 6ವರ್ಷದ ಮಕ್ಕಳಿಗೆ ಡಿಪಿಟಿ ಬೂಸ್ಟರ್ ಲಸಿಕೆ, ಗರ್ಭಿಣಿಯರಿಗೆ ಟಿಟಿ ಲಸಿಕೆ ಹಾಕಿಸುವುದು ಮುಖ್ಯವಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕುವ ವ್ಯವಸ್ಥೆ ಮಾಡಲಾಗಿದೆ. ಎಲ್ಲರೂ ಸದುಪಯೋಗ ಪಡೆಯಬೇಕು ಎಂದರು.
ನಗರಸಭೆ ಉಪಾಧ್ಯಕ್ಷ ಡಾ.ಬಸವರಾಜ ಇಜೇರಿ, ಮಾಜಿ ಅಧ್ಯಕ್ಷ ನಾಗಪ್ಪ ತಹಸೀಲ್ದಾರ ಇದ್ದರು, ಹಿರಿಯ ಆರೋಗ್ಯ ಸಹಾಯಕ ಮಲ್ಲಪ್ಪ ಕಾಂಬಳೆ, ಕಿರಿಯ ಆರೋಗ್ಯ ಸಹಾಯಕಿ ಶಾಂತಾಬಾಯಿ, ಆಶಾ ಕಾರ್ಯಕರ್ತರು, ಜುಮುನಾ ಬಾಯಿ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು, ಬಡಾವಣೆಯ ಮಾತೆಯರು ಇದ್ದರು.