ಸ್ವಧರ್ಮ ಮತು ಸ್ವದೇಶ ರಕ್ಷಣೆಗೆ ಹೋರಾಡಿದ ಸಂಸ್ಥಾನ ಸುರಪುರ
ಸುರಪುರ ವಿಜಯೋತ್ಸವ ಕಾರ್ಯಕ್ರಮ
ಯಾದಗಿರಿ, ಶಹಾಪುರ: ಮುತ್ತಾತನವರು ಸುರಪುರ ಸಂಸ್ಥಾನದಲ್ಲಿ ಸಲ್ಲಿಸಿದ ಸೇವೆಯು ನಮ್ಮೆಲ್ಲರಿಗೆ ಪ್ರೇರಣೆಯಾಗಿದೆ. ಇತಿಹಾಸದ ಆಸಕ್ತಿಯಿಂದ ನೆರೆ ರಾಷ್ಟ್ರದಿಂದ ಆಗಮಿಸಿ ಇಲ್ಲಿಗೆ ಬಂದಿರುವೆ. ಯುವಕರು ಇತಿಹಾಸವನ್ನು ಅದ್ಯಯನ ಮಾಡುವುದರಿಂದ ಹೆಚ್ಚಿನ ಸಾಧನೆ ಮಾಡಲು ಸಾಧ್ಯ ಎಂದು ಕ್ಯಾಲಿಪೋರ್ನಿಯಾದ ಡಾ.ಅಲ್ಬರ್ಟೋ ಟೇಲರ್ ತಿಳಿಸಿದರು.
ತಾಲ್ಲೂಕಿನ ಭೀಮರಯನಗುಡಿಯ ಕೃಷ್ಣಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸುರಪುರ ಇತಿಹಾಸ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಆಯೋಜಿಸಿದ್ದ “ಸುರಪುರ ವಿಜಯೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸುರಪುರ ಸಂಸ್ಥಾನದ ಇತಿಹಾಸ ತುಂಬಾ ರೋಚಕವಾಗಿದೆ. ಇನ್ನು ಸಾಕಷ್ಟು ಸಂಶೋಧನೆ ನಡೆಸಬೇಕು. ಅಮುಲ್ಯವಾದ ಪ್ರಾಚ್ಯವಸ್ತುಗಳನ್ನು ಸಂಗ್ರಹಿಸಿ ಇಡಬೇಕು. ಮುತ್ತಾತನವರು ನಡೆದ ಪತ್ರ ವ್ಯವಹಾರದ ದಾಖಲೆಗಳನ್ನು ಲಂಡನ್ ಮ್ಯೂಸಿಯಂನಿಂದ ಕಳುಹಿಸುವೆ. ನಿಮ್ಮ ಪ್ರೀತಿಗೆ ನಾನು ತಲೆಬಾಗುವೆ ಎಂದರು.
ಜೂಲಿಯನ್ ಟೇಲರ್ ಮಾತನಾಡಿ, ಮಿಡೋಸ್ ಟೇಲರ್ ವಂಶವೃಕ್ಷದ ಪ್ರಕಾರ ಹೇಳುವುದಾದರೆ ನಮ್ಮದು ಕೃಷಿಕ ಸಮಾಜವಾಗಿತ್ತು. ರೇಷ್ಮೆ, ಗೋದಿ, ಬೆಳೆಯುವ ಮೂಲಕ ಜೀವನ ನಡೆಸಿದ್ದೇವೆ. ಇಂದಿಗೂ ಹಿರಿಯರು ಬಿಟ್ಟು ಹೋಗಿರುವ ಕೃಷಿಯನ್ನು ನಾನು ಮುಂದುವರೆಸಿದ್ದೇನೆ. ಟೇಲರ್ ಉತ್ತಮ ಕಾರ್ಯಗಳಿಂದ ನಮಗೆ ಹೆಚ್ಚಿನ ಗೌರವ ಸಲ್ಲಿರುವುದು ಖುಷಿಯಾಗಿದೆ ಎಂದರು.
ಸಂಶೋಧನಾ ಕೇಂದ್ರ ಸಂಚಾಲಕ ಭಾಸ್ಕರರಾವ ಮುಡಬೂಳ ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶವಿದೆ. 1857ರಲ್ಲಿ ರಾಜಾ ವೆಂಕಟಪ್ಪ ನಾಯಕ ಇಡಿ ದಕ್ಷಿಣ ಭಾರತದ ನೇತೃತ್ವವಹಿಸಿ ಸ್ವಧರ್ಮ ಮತ್ತು ಸ್ವದೇಶಕ್ಕಾಗಿ ಯುದ್ಧ ನಡೆಸಿದ ಕೀರ್ತಿ ಇತಿಹಾಸದ ಪುಟದಲ್ಲಿ ರಾರಾಜಿಸುತ್ತಿದೆ. ಯುವಕರು ಸಂಸ್ಥಾನದ ಬಗ್ಗೆ ಇನ್ನೂ ಆಳವಾಗಿ ಸಂಶೋಧನೆ ನಡೆಸುವ ಅಗತ್ಯವಿದೆ. ಆ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಸುರಪುರ ಸಂಸ್ಥಾನದ ಪ್ರಧಾನ ಮಂತ್ರಿಯ ವಂಶಜ ಶರಣಬಸಪ್ಪ ನಿಷ್ಠಿ, ಮಾಜಿ ಸಚಿವ ರಾಜಾ ಮದಗೋಪಾಲ ನಾಯಕ, ಕೃಷಿ ಕಾಲೇಜಿನ ಡೀನ್ ಡಾ.ಲೋಕೇಶ, ಗುರುರಾಜರಾವ ಜೋಡಿದಾರ, ಶ್ರೀನಾಥ ಜೋಡಿದಾರ, ಎಲ್ಬಿಕೆ ಆಲ್ದಾಳ, ಕೃಷ್ಣಾ ಸುಬೇದಾರ, ಸುರೇಂದ್ರ ಪತ್ತಾರ, ಸಾಹಿತಿಗಳಾದ ಸಿದ್ಧರಾಮ ಹೊನ್ಕಲ್, ಡಾ.ಅಬ್ದುಲ್ ಕರೀಂ ಕನ್ಯಾಕೊಳ್ಳುರ, ರವಿ ಹಿರೇಮಠ, ವಿಜಯಕುಮಾರ ಹಿರೇಮಠ, ಬಸವರಾಜ ಅರುಣಿ, ರಾಜಗೋಪಾಲ ವಿಬೂತೆ, ರಿಯಾಜ್ ಅಹ್ಮದ ಬೋಡೆ, ಇಕ್ಬಾಲ್ ರಾಹಿ, ಹಣಮೇಶರಾವ ಐಕೂರ, ಉಮೇಶ ಮುಡಬೂಳ, ಶರಣಪ್ಪ ಪ್ಯಾಟಿ, ಮಲ್ಲಿಕಾರ್ಜುನ ಪೂಜಾರಿ, ಗುರುಲಿಂಗಪ್ಪ ಸ್ಥಾವರಮಠ ಅರವಿಂದ ಮುಡಬೂಳ, ಹೇಮರಡ್ಡಿ ಕೊಂಗಂಡಿ ಇತರರಿದ್ದರು.