ಮಾಲೀಕರೆ ಹುಷಾರ್… ಮಕ್ಕಳನ್ನು ಕೆಲಸಕ್ಕೆ ಬಳಸಿಕೊಂಡೀರಿ ಜೋಕೆ!
ಬಾಲ ಕಾರ್ಮಿಕ ಅಧಿಕಾರಿಗಳ ದಾಳಿ 6 ಮಕ್ಕಳ ವಶಕ್ಕೆ
ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಕೆಂಬಾವಿ ಪಟ್ಟಣದ ವಿವಿಧ ಅಂಗಡಿ, ಹೊಟೇಲ್‍ಗಳ ಮೇಲೆ ಜಿಲ್ಲಾ ಬಾಲ ಕಾರ್ಮಿಕ ಅಧಿಕಾರಿಗಳು ದಿಢೀರನೆ ದಾಳಿ ಮಾಡಿದ್ದು, 6 ಜನ ಬಾಲಕರನ್ನು ವಶಕ್ಕೆ ಪಡೆದಕೊಂಡ ಘಟನೆ ಶುಕ್ರವಾರ ನಡೆದಿದೆ.
ಪಟ್ಟಣ ಹಲವು ಹೊಟೇಲ್ ಅಂಗಡಿಗಳಲ್ಲಿ ಬಾಲಕರು ಕೆಲಸ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಾಲಕರು ಕಾರ್ಯನಿರ್ವಹಿಸುತ್ತಿರುವ ಆಯಾ ಅಂಗಡಿ, ಹೊಟೇಲ್ ಮಾಲೀಕರಿಗೆ ನೋಟಿಸ್ ನೀಡಲಾಗಿದೆ.
ನಂತರ ಪೋಷಕರನ್ನು ಕರೆಯಿಸಿ ಅವರ ಮಕ್ಕಳನ್ನು ಆಯಾ ಪಾಲಕರ ಸುಪರ್ದಿಗೆ ಒಪ್ಪಿಸಿದ್ದಾರೆ. ಅಲ್ಲದೆ ಬಾಲಕರನ್ನು ಕೆಲಸಕ್ಕೆ ಕಳುಹಿಸದಿರುವಂತೆ ತಾಕೀತು ಮಾಡಿದ್ದಾರೆ.
ಮುಂದೆ ಮಕ್ಕಳು ಕೆಲಸದಲ್ಲಿ ತೊಡಗಿಸಿಕೊಂಡಿರುವುದು ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ. ಅಲ್ಲದೆ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ಕೊಡಿಸುವಂತೆ ಸೂಚಿಸಿದ್ದಾರೆ. ನಾಡಿನಲ್ಲಿ ಯಾವುದೇ ಮಗುವಾಗಲಿ ಶಿಕ್ಷಣದಿಂದ ವಂಚಿತಗೊಳ್ಳಬಾರದು. ಪಾಲಕರು ತಮ್ಮ ಜವಬ್ದಾರಿ ಅರಿತು ನಡೆದುಕೊಳ್ಳಬೇಕು ಎಂದು ಎಚ್ಚರಿಸಿದ್ದಾರೆ.
ಅಲ್ಲದೆ ಇದೇ ಸಂದರ್ಭದಲ್ಲಿ ತಂಬಾಕು, ಗುಟಕಾ, ಧೂಮಪಾನ ಮಾರುತ್ತಿದ್ದ ಪಾನಶಾಪ್ ಹಾಗೂ ಕಿರಾಣಿ ಅಂಗಡಿಗಳ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಜಿಲ್ಲಾ ಬಾಲ ಕಾರ್ಮಿಕ ಇಲಾಖೆ ಯೋಜನಾ ನಿರ್ದೇಶಕ ರಘುಸಿಂಗ್ಮ ಕಾರ್ಮಿಕ ನಿರೀಕ್ಷ ಗಂಗಾಧರ ಮತ್ತು ಮಹಾಲಕ್ಷ್ಮೀ ಸಜ್ಜನ್ ಸೇರಿದಂತೆ ಆರೋಗ್ಯ ಅಧಿಕಾರಿಗಳು ದಾಳಿಯಲ್ಲಿ ಭಾಗವಹಿಸಿದ್ದರು.
ವ್ಯಾಪಾರಸ್ಥರೆ ಎಚ್ಚರ.. ಕಾರ್ಮಿಕರ ರಕ್ಷಣೆಗೆ ಸಹಕರಿಸಿ
14-15 ವಯಸ್ಸಿನೊಳಗಿರುವ ಮಕ್ಕಳನ್ನು ಯಾವುದೆ ಉದ್ಯಮ ಅಥವಾ ಹೊಟೇಲ್, ಅಂಗಡಿ ಸೇರಿದಂತೆ ಇತರೆ ಉದ್ಯಮಗಳಲ್ಲಿ ಕೆಲಸಕ್ಕೆ ಬಳಸಿಕೊಂಡಲ್ಲಿ ಬಾಲ ಕಾರ್ಮಿಕರ ರಕ್ಷಣ ಕಾಯ್ದೆ ಅನ್ವಯ ಶಿಕ್ಷೆಗೊಳಗಾಬೇಕಾಗುತ್ತದೆ. ಅಪರಾಧ ವಾಗುತ್ತದೆ. ಕಾರಣ ಮಾಲೀಕರು ಈ ಕುರಿತು ಜಿಜ್ಞಾಸೆ ಬಿಟ್ಟು, ಕಾನೂನಿನ ಅರಿವು ಪಡೆದುಕೊಂಡು ವ್ಯಾಪಾರ ವಹಿವಾಟ ಮಾಡುವುದು ಒಳಿತು. ಜಿಲ್ಲಾ ಕಾರ್ಮಿಕ ಇಲಾಖೆ ಹಿಂದೆಂದಿಗಿಂತಲೂ ಪ್ರಸ್ತುತ ಸ್ಟ್ರಾಂಗ್ ಆಗಿದ್ದು, ಸುರಪುರ, ಗುರಮಠಕಲ್, ಸದ್ಯ ಕೆಂಬಾವಿ ಇದಕ್ಕೊ ಮೊದಲು ಶಹಾಪುರ ಹೀಗೆ ದಾಳಿ ನಡೆಸುತ್ತಲೇ ಇದೆ. ಇಷ್ಟಾದರೂ ವ್ಯಾಪಾರಸ್ಥರು ಪಾಠ ಕಲಿಯುವದಿಲ್ಲ ಎಂದರೆ, ಕಾನೂನು ಕ್ರಮ ಅಗತ್ಯವೆಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಶದ ಕಾನೂನಿಗೆ ಗೌರವ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ವ್ಯಾಪಾರಿಗಳು ತಮ್ಮ ಚಿಕ್ಕ ಮಕ್ಕಳನ್ನು ಶಾಲೆ ಬಿಡಿಸಿ ವ್ಯಾಪಾರಕ್ಕೆ, ಇತರೆ ಕೆಲಸಕ್ಕೆ ಬಳಸಿಕೊಳ್ಳಲು ಸಿದ್ಧರಿದ್ದೀರಾ..ಇಲ್ಲಾ ಎಲ್ಲಾ ಮಕ್ಕಳು ಅಷ್ಟೆ, ಅವರಿಗಾಗಿ ಶೈಕ್ಷಣಿಕ ಸೌಲಭ್ಯಗಳಿವೆ. ಅನಾಥ, ಅಥವಾ ಬಡತನದ ಮಕ್ಕಳು ಕೆಲಸಕ್ಕೆ ಬಂದಲ್ಲಿ ದಯವಿಟ್ಟು, ಕಾರ್ಮಿಕ ಇಲಾಖೆ, ಸಂಬಂಧಸಿದ ತಾಲೂಕು ಅಧಿಕಾರಿಗಳು, ಸಂಘ ಸಂಸ್ಥೆಗಳನ್ನು ಸಂಪರ್ಕಿಸಿ ಶೈಕ್ಷಣಿಕ ವ್ಯವಸ್ಥೆ ಕಲ್ಪಿಸುವ ಕಾರ್ಯವಾಗಲಿ ಎಂಬುದು ವಿನಯವಾಣಿ ಕಳಕಳಿಯಾಗಿದೆ.