ಮಾದಿಗ ಸಮಾಜ ಬೆಳವಣಿಗೆಗೆ ಸಂಘಟನೆ ಅಗತ್ಯ-ಬಿಲ್ಲವ್
ಯಾದಗಿರಿ,ಶಹಾಪುರಃ ಮಾದಿಗ ಸಮಾಜದ ಯುವಕರು ಸಂಘಟನಾತ್ಮಕವಾಗಿ ಸಮಾದಜ ಎಲ್ಲರನ್ನು ಒಟ್ಟುಗೂಡಿಸುವ ಕೆಲಸ ಮಾಡಬೇಕು. ಸಮಾಜದ ಬೆಳವಣಿಗೆಗೆ ಸಂಘಟನೆ ಅಗತ್ಯವಿದೆ. ಆ ನಿಟ್ಟಿನಲ್ಲಿ ಸಮಾಜ ಬಾಂಧವರು ಒಗ್ಗಟ್ಟಾಗಬೇಕು. ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಾಮಾಜಿಕವಾಗಿ ಸಮಾಜದ ಏಳ್ಗೆಗೆ ಎಲ್ಲರೂ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಕಲ್ಯಾಣ ಕರ್ನಾಟಕ ವಿಭಾಗದ ಕರ್ನಾಟಕ ಮಾದಿಗರ ಸಂಘದ ಅಧ್ಯಕ್ಷ ಭೀಮಾಶಂಕರ ಬಿಲ್ಲವ್ ತಿಳಿಸಿದರು.
ನಗರದ ಗುತ್ತಿಪೇಠ ಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕು ಕರ್ನಾಟಕ ಮಾದಿಗರ ಸಂಘಕ್ಕೆ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನೂತನ ಪದಾಧಿಕಾರಿಗಳು ತಾಲೂಕಿನ ಮಾದಿಗರನ್ನು ಒಂದಡೆ ಸೇರಿಸುವ ಕೆಲಸ ಮಾಡಬೇಕು. ಸಂಘಟನೆಯಲ್ಲಿ ಅಗಾಧ ಶಕ್ತಿ ಇದೆ. ನಾವೆಲ್ಲ ಒಂದಾಗಿ ಸಮುದಾಯದ ಶಕ್ತಿ ತೋರಿದಲ್ಲಿ ಮಾತ್ರ ನಾವುಗಳು ರಾಜಕೀಯವಾಗಿ, ಸಾಮಾಜಿಕವಾಗಿ ಬೆಳೆಯಲು ಸಾಧ್ಯವಿದೆ.
ಅಲ್ಲದೆ ಸಮುದಾಯಕ್ಕೆ ಅನ್ಯಾಯವಾದಲ್ಲಿ ಕೂಡಲೇ ಸಂಘಟನೆ ರಸ್ತೆಗಿಳಿದು ಹೋರಾಟ ಮಾಡುವ ಮೂಲಕ ನ್ಯಾಯ ಪಡೆಯಬೇಕು. ಆ ನಿಟ್ಟಿನಲ್ಲಿ ಯುವ ಸಮುದಾಯ ಸದಾ ಮುಂದಿರಬೇಕು. ಯುವ ಸಮುದಾಯ ಎಲ್ಲದಕ್ಕೂ ಸಿದ್ಧರಾಗಿರಬೇಕು. ಯುವ ಶಕ್ತಿಯಿಂದ ಏನೆಲ್ಲ ಮಾಡಬಹುದು.
ಸಮಾಜದ ಹಿರಿಯರ ಮಾರ್ಗದರ್ಶನದಲ್ಲಿ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಸಲಹೆ ನೀಡಿದರು. ಶೈಕ್ಷಣಿವಾಗಿ ಮೊದಲು ಬಲಾಢ್ಯರಾಗಬೇಕು. ಎಲ್ಲರೂ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳಿಗೆ ಅಧಿಕಾರ ವಹಿಸಲಾಯಿತು. ನೂತನ ಗೌರವ ಅಧ್ಯಕ್ಷರಾಗಿ ಸೋಪಣ್ಣ ಸಗರ, ಅಧ್ಯಕ್ಷರಾಗಿ ಶಿವಕುಮಾರ ದೊಡ್ಮನಿ, ಉಪಾಧ್ಯಕ್ಷರಾಗಿ ಮಲ್ಲು ಬಡಿಗೇರ ಮತ್ತು ಶಿವು ದಿಗ್ಗಿ,ಕಾರ್ಯದರ್ಶಿಯಾಗಿ ಗುರುರಾಜ ದೊಡ್ಮನಿ ಮತ್ತು ಸಂಘಟನಾ ಕಾರ್ಯದರ್ಶಿಯಾಗಿ ಅವಿನಾಶ ಗುತ್ತೇದಾರ, ಕಾನೂನು ಸಲಹೆಗಾರರಾಗಿ ವಾಸುದೇವ ಕಟ್ಟಿಮನಿ, ಪ್ರಚಾರ ಸಮಿತಿ ಮುಖಂಡರಾಗಿ ಕೃಷ್ಣ ಮದ್ರಿಕಿ ಮತ್ತು ಖಜಾಂಚಿಯಾಗಿ ಚಂದ್ರು ಕಂಚನಕವಿ ಅವರಿಗೆ ಅಧಿಕಾರ ವಹಿಸಲಾಯಿತು. ಈ ಸಂದರ್ಭದಲ್ಲಿ ಸಮಾಜದ ಹಿರಿಯರು, ಯುವಕರು ಪದಾಧಿಕಾರಿಗಳು ಇತರರಿದ್ದರು.