ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ಪ್ರತಿಭಟನೆ
yadgiri-shahapur-ಕೊರೊನಾ ತೀವ್ರತೆಯಿಂದ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬಡಕುಟುಂಬಗಳ ರಕ್ಷಣೆ ಸೇರಿದಂತೆ ಹಲವಾರು ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಸಿಐಟಿಯು ನಗರದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರರ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕೋವಿಡ್-19 ಸಾಂಕ್ರಾಮಿಕ ರೋಗವು ದೇಶದ ಜನತೆಯನ್ನು ಬಾಧಿಸುತ್ತದೆ. ದೇಶ ಮತ್ತು ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಹಲವಾರು ಜಿಲ್ಲೆಗಳು ತೀವ್ರ ಸಮಸ್ಯೆಯಿಂದ ನರಳುವಂತಾಗಿದೆ. ದೇಶದಲ್ಲಿ ಆರ್ಥಿಕತೆ ಸ್ಥಿತಿ ಚೇತರಿಕೆ ಕಾಣುವದು ತುಂಬಾ ಕಷ್ಟವಿದೆ.
ಹೀಗಾಗಿ ಇಂತಹ ಸಂದರ್ಭದಲ್ಲಿ ನಿತ್ಯ ದುಡಿದು ಉಣ್ಣುವ ಜನರ ಬದುಕು ಸಂಕಷ್ಟಕ್ಕೆ ಈಡಾಗಿದೆ. ಕೋವಿಡ್ ನಿಯಂತ್ರಿಸಿ ಜನರನ್ನು ಸಂರಕ್ಷಿಸಬೇಕಾದ ಕೇಂದ್ರ-ರಾಜ್ಯ ಸರ್ಕಾರಗಳು ಕೈ ಚೆಲ್ಲಿ ಕೂತಂತಿದೆ. ದೇಶದಲ್ಲಿ ಕೋವಿಡ್ ನಿಯಂತ್ರಿಸಿ ಜನರ ಆರ್ಥಿಕತೆ ಉತ್ತಮ ಪಡಿಸಬೇಕಾದ ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಯನ್ನು ರಾಜ್ಯಗಳಿಗೆ ವರ್ಗಾಯಿಸಿರುವದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಏಕಾಏಕಿ ಲಾಕ್‍ಡೌನ್ ಘೋಷಿಸಿದ ಕೇಂದ್ರ ಸರ್ಕಾರ ಅದರಿಂದುಂಟಾಗುವ ದುಷ್ಪರಿಣಾಮಗಳನ್ನು ಎದುರಿಸಲು ಯಾವುದೇ ಕ್ರಮ ಜರುಗಿಸಲಿಲ್ಲ ಎಂದು ಆರೋಪಿಸಿದರು.
ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಪ್ರತಿ ಕುಟುಂಬಕ್ಕೂ 6 ತಿಂಗಳು ಮಾಸಿಕ ರೂ. 7,500/- ರೂಪಾಯಿಗಳ ನೇರ ನಗದು ವರ್ಗಾವಣೆ ಮಾಡಬೇಕು. ವಿದ್ಯುತ್ ತಿದ್ದುಪಡಿ ಮಸೂದೆ 2020 ಅನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷೆ ಬಸಲಿಂಗಮ್ಮ ನಾಟೇಕಾರ, ಜಿಲ್ಲಾಧ್ಯಕ್ಷ ಮಲ್ಲಣ್ಣ ಬರೆದಾರ, ತಾಲ್ಲೂಕ ಸಂಚಾಲಕ ಮಲ್ಲಯ್ಯ ಪೋಲಂಪಲ್ಲಿ, ಹಣಮಂತಿ ಮೌರ್ಯ, ಯಮನಮ್ಮ ದೋರನಹಳ್ಳಿ, ಈರಮ್ಮ ಹಯ್ಯಾಳಕರ್, ಸುನಂದಾ ಹಿರೇಮಠ ಸೇರಿದಮತೆ ಇತರರಿದ್ದರು.