ಹೆದ್ದಾರಿ ಮೇಲೆ ಬಿಡಾರ ಹೂಡಿದ ದನಗಳು
ಶಹಾಪುರದಲ್ಲಿ ಬಿಡಾಡಿ ದನಗಳ ಹಾವಳಿ- ವಾಹನ ಸವಾರರು ಕಂಗಾಲು
ಮಲ್ಲಿಕಾರ್ಜುನ ಮುದ್ನೂರ
ಶಹಾಪುರಃ ನಗರದ ಹೆದ್ದಾರಿ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು ಸಂಚಾರಕ್ಕೆ ಸಂಚಕಾರ ಉಂಟಾಗಿದೆ.
ಪಟ್ಟಣದ ಸಿಬಿ ಕಮಾನ್, ಬಸವೇಶ್ವರ ವೃತ್ತ, ಹಳೇ ಬಸ್ ನಿಲ್ದಾಣ ಸೇರಿದಂತೆ ಮೋಚಿಗಡ್ಡಾ, ಕೋರ್ಟ್ ರಸ್ತೆ ಮತ್ತು ಯಾದಗಿರಿ ರಸ್ತೆ ವಿವಿಧಡೆ ಬಿಡಾಡಿ ದನಗಳು ರಾಜಾರೋಷವಾಗಿ ರಸ್ತೆ ಮಧ್ಯೆದಲ್ಲಿಯೇ ಓಡಾಡುತ್ತಿರುವದರಿಂದ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ.
ದನ ಜಾನುವಾರು ಹಾವಳಿಯಿಂದ ಸಾರ್ವಜನಿರ ಸಂಚಾರಕ್ಕೆ ಅಡೆತಡೆ ಉಂಟಾಗುತ್ತಿದೆ. ಈ ಕುರಿತು ಸಾಕಷ್ಟು ಬಾರಿ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನೆಯಾಗಿಲ್ಲ ಎಂದು ನಾಗರಿಕರು ದೂರಿದ್ದಾರೆ.
ನಗರದ ಹಳೇ ಬಸ್ ನಿಲ್ದಾಣದಲ್ಲಿ ನಿತ್ಯ ಬಿಡಾಡಿ ದನಗಳ ಹಾವಳಿಯಿಂದ ವಾಹನ ಸವಾರರಷ್ಟೆ ಅಲ್ಲದೆ ಬೀದಿ ವ್ಯಾಪಾರಿಗಳು ಸಹ ಪರದಾಡುವಂತಾಗಿದೆ.
ಹಣ್ಣು ಹಂಪಲು ವ್ಯಾಪರಸ್ಥರು ಸೇರಿದಂತೆ ಇತರೆ ಕಿರುಕುಳ ವ್ಯಾಪರಿಗಳಿಗೂ ಈ ದನಗಳಿಂದ ಕಿರಿಕಿರಿ ಹೆಚ್ಚಾಗಿದೆ. ನಗರಸಭೆ ಅಧಿಕಾರಿಗಳ ಕಣ್ಣಿಗೆ ಕಂಡೂ ಜಾಣ ಮೌನವಹಿಸಿದ್ದಾರೆ ಎಂದು ವ್ಯಾಪಾರಸ್ಥರು ಆರೋಪಿಸಿದ್ದಾರೆ.
ಅಲ್ಲದೆ ಬೆಳಗ್ಗೆ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೂ ಸಹ ಬಿಡಾಡಿ ದನಗಳಿಂದ ಭಯದ ವಾತಾವರಣ ಸೃಷ್ಠಿಯಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳೂ ಬಿಡಾಡಿ ದನಗಳನ್ನು ಹಿಡಿದು ಬೇರಡೆ ಸಾಗಿಸುವ ಕೆಲಸ ಮಾಡಬೇಕು. ಅಲ್ಲದೆ ಅವುಗಳ ಮಾಲೀಕರನ್ನು ಕರೆಸಿ ಒಪ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
——–
ನಗರದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಕೂಡಲೇ ಅವುಗಳನ್ನು ಬೇರಡೆ ಸಾಗಿಸುವ ಕೆಲಸವಾಗಬೇಕು. ವಾಹನ ಸವಾರರು ಮತ್ತು ವ್ಯಾಪಾರಸ್ಥರಿಗೆ ಅನುಕೂಲ ಕಲ್ಪಿಸಬೇಕು. ಇಲ್ಲವಾದಲ್ಲಿ ನಗರಸಭೆ ಕಚೇರಿ ಮುಂದೆ ಧರಣಿ ನಡೆಸಲಾಗುವದು.
–ಭೀಮಾಶಂಕರ ಕಟ್ಟಿಮನಿ.
ಕಲ್ಯಾಣ ಕರ್ನಾಟಕ ಯುವ ಸೇನೆ ತಾಲೂಕು ಅಧ್ಯಕ್ಷ.