ನಾಳೆ ಬೀದರ್ -ಕಲಬುರಗಿ ರೈಲು ಮಾರ್ಗ ಉದ್ಘಾಟನೆ: ಖರ್ಗೆ ಕಡೆಗಣನೆ ಖಂಡಿಸಿ ಆಕ್ರೋಶ
ಬೀದರ್ -ಕಲಬುರಗಿ ರೈಲು ಮಾರ್ಗ ಉದ್ಘಾಟನೆ: ಖರ್ಗೆ ಕಡೆಗಣನೆ ಖಂಡಿಸಿ ಆಕ್ರೋಶ
ಬೀದರಃ ಪ್ರಧಾನಿ ಮೋದಿಯಿಂದ ಬೀದರ್- ಕಲಬುರಗಿ ರೈಲು ಮಾರ್ಗಕ್ಕೆ ಚಾಲನೆ ಹಿನ್ನಲೆಯಲ್ಲಿ ನಾಳೆ ಬೀದರನಲ್ಲಿ ರೈಲು ಮಾರ್ಗ ಉದ್ಘಾಟನಾ ರ್ಯಕ್ರಮ ಆಯೋಜಿಸಲಾಗಿದೆ. ಆದರೆ, ರೈಲು ಮಾರ್ಗದ ರೂವಾರಿಗಳಾದ ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ಸಿನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂಬುದು ಕಾಂಗ್ರೆಸ್ ಆರೋಪ. ಹೀಗಾಗಿ, ಖರ್ಗೆ ಅವರನ್ನು ಕಡೆಗಣಿಸಿ ಆಯೋಜಿಸಲಾಗಿರುವ ಕಾರ್ಯಕ್ರಮವನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಕಲಬುರ್ಗಿ ತಾಲೂಕಿನ ಕಮಲಾಪೂರ, ಬೀದರ ಹಾಗೂ ಕಲಬುರಗಿ ಸೇರಿದಂತೆ ವಿವಿದೆಡೆ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಟೈರ್ ಗೆ ಬೆಂಕಿ ಹಚ್ಚುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲಬುರಗಿ -ಬೀದರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರ ಹಾಗೂ ಪ್ರಧಾನಕ ನರೇಂದ್ರ ಮೋದಿ ಅವರ ವಿರುದ್ಧ ಘೋಷಣೆ ಕೂಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಬೀದರ್- ಕಲಬುರಗಿ ರೈಲು ಯೋಜನೆ ರೂವಾರಿಯೇ ಖರ್ಗೆ ಅವರಾಗಿದ್ದು, ಈಗ ಬಿಜೆಪಿ ಕ್ರೇಡಿಟ್ ಪಡೆದುಕೊಳ್ಳಲು ಕಲಬುರಗಿ ಬಿಟ್ಟು ಬೀದರ್‌ನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಅಷ್ಟೇ ಅಲ್ಲದೆ ಖರ್ಗೆ ಅವರನ್ನೇ ಕಾರ್ಯಕ್ರಮಕ್ಕೆ ಆಹ್ವಾನಿಸದೆ ಕಡೆಗಣಿಸಿರೋದು ಕೇಂದ್ರ ಸರ್ಕಾರದ ಸಂಕುಚಿತ ಮನೋಭಾವ ತೋರುತ್ತದೆ ಎಂದು ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಉದ್ಘಾಟನೆಗೊಳ್ಳುತ್ತಿರುವ ಪ್ರಮುಖ ಯೋಜನೆ ಇದಾಗಿದೆ. ಆದರೆ ಕಾರ್ಯಕ್ರಮ ಉದ್ಘಾಟನೆಗೆ ಸಿಎಂ ಸಿದ್ರಾಮಯ್ಯನವರಿಗೂ ಆಹ್ವಾನ ನೀಡದಿರುವುದು ಶಿಷ್ಟಾಚಾರ ಉಲ್ಲಂಘನೆಯಾಗುತ್ತದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದ್ದಾರೆ. ಒಟ್ಟಾರೆ ನಾಳೆ ನಡೆಯಲಿರುವ ಬೀದರ-ಕಲಬುರ್ಗಿ ರೈಲ್ವೆ ಮಾರ್ಗ ಉದ್ಘಾಟನಾ ಸಮಾರಂಭದ ಮೇಲೆ ಕಾರ್ಮೋಡ ಕವಿದಿದೆ. ಆದರೆ, ಕಾಂಗ್ರೆಸ್ಸಿಗರ ಆರೋಪಕ್ಕೆ ಪ್ರಧಾನಿ ನರೇಂದ್ರ ಮೋದಿ ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.