ನಿವೃತ್ತ ಶಿಕ್ಷಕ ಬಿರಾದಾರಗೆ ಹೃದಯಸ್ಪರ್ಶಿ ಸನ್ಮಾನ

ನಿವೃತ್ತ ಶಿಕ್ಷಕ ಬಿರಾದಾರಗೆ ಹೃದಯಸ್ಪರ್ಶಿ ಸನ್ಮಾನ
ದೋರನಹಳ್ಳಿ ಯುವಕರಲ್ಲಿ ಹಾಸುಹೊಕ್ಕಿದ ಗುರುಭಕ್ತಿ, ಗಮನ ಸೆಳೆದ ಹಾಸ್ಯ ಕಾರ್ಯಕ್ರಮ,
ಯಾದಗಿರಿ, ಶಹಾಪುರ: ವಿದ್ಯಾರ್ಥಿಗಳಲ್ಲಿ ಗುರುಭಕ್ತಿಯ ಔದಾರ್ಯತೆ ಕಂಡು ಶಿಕ್ಷಕನಾಗಿ ನಿರ್ವಹಿಸಿದ ಕರ್ತವ್ಯ, ವೃತ್ತಿ ಜೀವನ ಸಾರ್ಥಕ ಎನಿಸಿದೆ ಎಂದು ನಿವೃತ್ತ ಪ್ರಭಾರಿ ಅಕ್ಷರ ದಾಸೋಹ ಅಧಿಕಾರಿ . ಮಲ್ಲನಗೌಡ ಬಿರಾದಾರ ಹೇಳಿದರು.
ತಾಲೂಕಿನ ದೋರನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಳೇ ವಿದ್ಯಾರ್ಥಿಗಳ ಸಂಘದಿಂದ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ವಿಶೇಷ ಗೌರವ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನಾನು ನನ್ನ ವೃತ್ತಿಯ ಬಗ್ಗೆ ಹೆಮ್ಮೆ ಪಡುವ ಕ್ಷಣ ಇಂದು ನನಸಾಗಿದೆ. ಮಾಡುವ ಕೆಲಸಪ್ರೀತಿಯಿಂದ ಮಾಡಿದಾಗ ಅದಕ್ಕೆ ನಿಜವಾದ ಅರ್ಥ ಮತ್ತು ಗೌರವ ಬರುತ್ತದೆ. ಹಾಲುಂಡ ತವರಿಗೆ ಏನೆಂದು ಹಾಡಲಿ ಹೊಳೆದಂಡಿಯಲ್ಲಿನ ಕರಕಿಯ ಹಂಗ ಹಬ್ಬಲಿ ಅವರ ರಸಬಳ್ಳಿ ಎನ್ನುವಂತೆ ನನ್ನ ಶಿಕ್ಷಕ ಜೀವನಕ್ಕೆ ದೊಡ್ಡ ಇತಿಹಾಸ ಕೊಟ್ಟ ದೋರನಹಳ್ಳಿ ಗ್ರಾಮ ಮತ್ತು ಇಲ್ಲಿನ ವಿದ್ಯಾರ್ಥಿಗಳ ಕೀರ್ತಿಯ ರಸಬಳ್ಳಿ ಹೆಚ್ಚಿಚ್ಚು ಹಬ್ಬಲಿ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಹಾಪುರ ತಾಲೂಕು ಶಿಕ್ಷಣ ಸುಧಾರಣಾ ಸಮಿತಿ ಅಧ್ಯಕ್ಷ ಶಾಂತಗೌಡ ಪಾಟೀಲ್, ದೋರನಹಳ್ಳಿ ಗ್ರಾಮಕ್ಕೆ ತನ್ನದೇ ಆದ ಇತಿಹಾಸವಿದೆ. ಈಗ ಅಕ್ಷರ ಕಲಿಸಿದಗುರುವಿಗೆ ಹೃದಯ ಸ್ಪರ್ಶಿ ಗೌರವ ವಂದನೆ ನಿಜಕ್ಕೂ ಶ್ಲಾಘನಿಯ. 21 ವರ್ಷ ಇಲ್ಲಿ ಸೇವೆ ಸಲ್ಲಿಸಿ ಇಲ್ಲಿಂದ ವರ್ಗವಾಗಿ ಹೋಗಿ 10 ವರ್ಷ ಕಳೆದರೂ, ಮತ್ತೆ ಅವರನ್ನು ಇಲ್ಲಿ ಗೌರವಿಸುವುದು ನೋಡಿದರೆ ಮಲ್ಲನಗೌಡರು ತಮ್ಮ ವಿದ್ಯಾರ್ಥಿಗಳನ್ನು ಈ ಊರನ್ನು ಹೇಗೆ ಪ್ರೀತಿಸಿದ್ದಾರೆ ಎಂದು ಗೊತ್ತಾಗು ತ್ತದೆ. ಈ ಪ್ರೀತಿ ಎಲ್ಲರಿಗೂ ಸಿಗಲಾರದು ಎಂದರು.
ಅಭಿನವ ಮಹಾಂತೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾದ ಅಮರೇಶ ಕೆ. ಎಂ.ಎಸ್.ಪಾಟೀಲ್, ಗ್ರಾಮದ ಮುಖಂಡರಾದ ಈಶ್ವರಪ್ಪ ಲಕಶೆಟ್ಟಿ ಮಾತನಾಡಿದರು.
ಶಾಲೆಯ ಮುಖ್ಯಗುರು ಶಾಂತಪ್ಪ ಕೆರಟಗಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಖ್ಯಾತ ಹಾಸ್ಯ ಕಲಾವಿದರಾದ ಬಸವರಾಜ ಮಹಾಮನಿ ಮತ್ತು ಗುಂಡಪ್ಪ ಡಿಗ್ನಿ ಅವರಿಂದ ಹಾಸ್ಯಮಯ ಕಾರ್ಯಕ್ರಮ ಜರುಗಿತು.
ಅದೆಷ್ಟೋ ಕಾರ್ಯಕ್ರಮಗಳನ್ನು ನಾವು ನೀಡಿದ್ದೇವೆ. ಆದರೆ, ದೋರನಹಳ್ಳಿ ಗ್ರಾಮದ ಹಳೇ ವಿದ್ಯಾರ್ಥಿಗಳ ಸಂಘ ಆಯೋಜಿಸಿದ್ದ ಗುರುವಿನ ಬೀಳ್ಕೊಡುಗೆ ಕಾರ್ಯಕ್ರಮ ಗ್ರಾಮದ ಜನರ ಸಂಸ್ಕಾರ, ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕೈಗನ್ನಡಿ ಎಂದರೆ ತಪ್ಪಾಗಲಾರದು. ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನನಗೆ ಹೆಮ್ಮೆ ಅನಿಸುತ್ತದೆ.
-ಬಸವರಾಜ ಮಹಾಮನಿ ಖ್ಯಾತ ಹಾಸ್ಯ ಭಾಷಣಕಾರ
ದೋರನಹಳ್ಳಿ ಗ್ರಾಮ ಧಾರ್ಮಿಕ ಕಾರ್ಯಕ್ರಮಗಳನ್ನೂ ಹೇಗೆ ಆಚರಿಸುತ್ತಾರೋ ಅದರಂತೆ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಅದರಲ್ಲಿ ನಾವು ಭಾಗವಹಿಸಿದ್ದು ಬಹಳ ಸಂತಸ ತಂದಿದೆ. ಅಕ್ಷರ ಕಲಿಸಿದ ಗುರುವಿಗೆ ಭಾವನಾತ್ಮಕವಾಗಿ ಗೌರವಿಸಿದ್ದು ಇಂದಿನ ಯುವ ಜನಾಂಗಕ್ಕೆ ಮಾದರಿಯಾಗಿದೆ.
. ಗುಂಡಣ್ಣಡಿಗ್ಗಿ ಖ್ಯಾತ ಹಾಸ್ಯ ಭಾಷಣಕಾರರು.