ಸಮಾಜಮುಖಿ ಕಾರ್ಯದಲ್ಲಿ ಸಂತೃಪ್ತಿ: ಸಲಾದಪುರ
ಮಹಿಳೆಯರಿಗೆ ಸೀರೆ, ಮಕ್ಕಳಿಗೆ ಶೈಕ್ಷಣಿಕ ಸಾಮಾಗ್ರಿ ವಿತರಣೆ
ಯಾದಗಿರಿಃ ಕಾಯಕ ತತ್ವದಲ್ಲಿ ನಂಬಿಕೆ ಇಟ್ಟು, ಫಲಾಪೇಕ್ಷೆಯಿಲ್ಲದೆ ಸಮಾಜಮುಖಿ ಕಾರ್ಯಮಾಡುತ್ತ ಅದರಲ್ಲಿ ಸಂತೃಪ್ತಿ ಕಾಣುವ ವ್ಯಕ್ತಿಗಳಲ್ಲಿ ಡಾ.ದೇವಿಂದ್ರಪ್ಪ ಹಡಪದ ಅವರು ಒಬ್ಬರಾಗಿದ್ದಾರೆ ಎಂದು ರೈತ ಮುಖಂಡ ಶರಣಪ್ಪ ಸಲಾದಪುರ ತಿಳಿಸಿದರು.
ಜಿಲ್ಲೆಯ ಶಹಾಪುರ ನಗರದ ಹಳೆಪೇಟೆಯ ಜ್ಞಾನಗಂಗೋತ್ರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮಾಜ ಸೇವಕ ಡಾ.ದೇವಿಂದ್ರಪ್ಪ ಹಡಪದ ಅವರ 61ನೇ ಜನ್ಮದಿನ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಡ ಮಹಿಳೆಯರಿಗೆ ಉಚಿತವಾಗಿ ಸೀರೆ, ವಿದ್ಯಾರ್ಥಿಗಳಿಗೆ ನೋಟ್‍ಬುಕ್ ವಿತರಿಸಿ ಮಾತನಾಡಿದರು.
ಪ್ರಕೃತಿ ತನ್ನ ಕಾರ್ಯವನ್ನು ನ್ಯಾಯಬದ್ಧವಾಗಿ ಮಾಡುವಂತೆ ಯಾವುದೇ ಸ್ವಾರ್ಥಭಾವ ತೋರದೆ ಉತ್ತಮ ಮನೋಭಾವನೆಯಿಂದ ಸಮಾಜ ಕಾರ್ಯದಲ್ಲಿ ತೊಡಗುವುದರಿಂದ ಮಾನವೀಯ ಮೌಲ್ಯಕ್ಕೊಂದು ಅರ್ಥ ಬರುತ್ತದೆ.
ಜನ್ಮದಿನವನ್ನು ಶಾಲಾ ವಿದ್ಯಾರ್ಥಿಗಳೊಂದಿಗೆ ಸಮುದಾಯದೊಂದಿಗೆ ಆಚರಿಸಿಕೊಳ್ಳುವುದು ಅತ್ಯಂತ ಸ್ತುತ್ಯಾರ್ಹವಾದ ಕಾರ್ಯವಾಗಿದೆ ಎಂದ ಅವರು, ಪ್ರಸ್ತುತ ಸಂದರ್ಭದಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದು ಅಗತ್ಯವಾಗಿದೆ.
ಮನೆಯೇ ಮೊದಲು ಪಾಠಶಾಲೆ ಜನನಿ ತಾನೇ ಮೊದಲು ಗುರು ಎನ್ನುವಂತೆ ವಿದ್ಯಾರ್ಥಿ ದೆಸೆಯಲ್ಲಿ ಸನ್ನಡತೆಯ ಬಗ್ಗೆ ತಿಳಿಸಬೇಕು. ಶಿಕ್ಷಕ ವೃಂದದವರು ಪ್ರೀತಿ ವಿಶ್ವಾಸದಿಂದ ಮುದ್ದು ಮಕ್ಕಳಲ್ಲಿ ಶಿಕ್ಷಣದ ಜೊತೆ ಸಂಸ್ಕಾರ ತುಂಬಿ ಅವರ ವಿಕಾಸಕ್ಕೆ ಪ್ರೇರಣೆ ನೀಡಬೇಕು ಎಂದರು.
ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಸಲೀಂ ಸಂಗ್ರಾಮ ಮಾತನಾಡಿ, ಎಸ್.ಆರ್.ಐ ಶಿಕ್ಷಣ ಸಂಸ್ಥೆಯು ಸಮಾಜ ಕಾರ್ಯ ಮಾಡುತ್ತಿದ್ದು ಅದರ ವ್ಯಾಪ್ತಿ ಹೆಚ್ಚಿಸಲಿ ಎಂದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅನಂತರಾವ ದೇಶಪಾಂಡೆ, ಗೋಪಾಲ ಸುರಪುರ, ಬಸವರಾಜ ವಗ್ಗನವರ, ಭೀಮರಾಯ ಶಿರವಾಳ, ಮಧ್ವಾಚಾರ್ಯ ಸಗರ, ಮಲ್ಲಿಕಾರ್ಜುನ ಹೂಗಾರ ಇದ್ದರು.
ಇದೇ ಸಂದರ್ಭದಲ್ಲಿ ಡಾ.ದೇವಿಂದ್ರಪ್ಪ ಹಡಪದ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಶಿಕ್ಷಕ ಮಲ್ಲಿಕಾರ್ಜುನ ನಿರೂಪಿಸಿದರು. ದೀಪಕ್ ಗಾಳಿ ಪ್ರಾರ್ಥಿಸಿದರು. ಮಲ್ಲಿಕಾರ್ಜುನ ಸಗರ ಸ್ವಾಗತಿಸಿದರು. ಜಾನಪದ ಕಲಾವಿದರಾದ ರಾಮಕೃಷ್ಣ ಕುಲ್ಕರ್ಣಿ, ದ್ಯಾವಣ್ಣ ಮಾಸ್ತರ, ಗುರಣ್ಣ ಬಾದ್ಯಾಪುರ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳ ಬಡಾವಣೆಯ ಮಹಿಳೆಯರು ಭಾಗವಹಿಸಿದ್ದರು.