ಬಡವರ ಬದುಕಿಗೆ ಬರೆ ಎಳೆದ ಕಾಂಗ್ರೆಸ್ ದೊರೆ, ಬಿಜೆಪಿ ಪ್ರತಿಭಟನೆ ಹಲವರ ಬಂಧನ.!
ಇದೇನು ಯಾತ್ರೆಯೋ ಅಥವಾ ಬಡವರ ಸಂಹಾರವೋ.?
ಕಲಬುರ್ಗಿಃ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಅಧಿನಾಯಕ ರಾಹುಲ್ ಗಾಂಧಿಯವರು ಜನಾಶೀರ್ವಾದ ಯಾತ್ರೆ ನಡೆಸುತ್ತಿರುವುದರಿಂದ ಆಯ ಪಟ್ಟಣ, ಜಿಲ್ಲೆ ಸೇರಿದಂತೆ ಗ್ರಾಮಗಳಲ್ಲಿ ಸಣ್ಣ ವ್ಯಾಪಾರಸ್ಥರು ಸೇರಿದಂತೆ ಇತರೆ ಕಿರಾಣಿ ಅಂಗಡಿ ವ್ಯಾಪರಸ್ಥರು ಮತ್ತು ಬೀದಿ ಬದಿಯ ಹಣ್ಣಿನ ವ್ಯಾಪಾರಿಗಳನ್ನು ಒಕ್ಕಲ್ಲೆಬಿಸುತ್ತಿರುವ ರಾಜ್ಯ ಕಾಂಗ್ರೆಸ್ ನಡೆಯನ್ನು ವಿರೋಧಿಸಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕಲ್ಲೂರ ಗ್ರಾಮದ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮುಂಜಾಗ್ರತಾ ಕ್ರಮವಾಗಿ ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ನರಬೋಳಿ ಮತ್ತು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ನೆಲೋಗಿ ಪೊಲೀಸ್ ಠಾಣೆಗೆ ಕರೆದೊಯ್ದರು.
ಈ ಸಂದರ್ಭದಲ್ಲಿ ಮಾತನಾಡಿದ ನರಬೋಳಿಯವರು, ಕಾಂಗ್ರೆಸ್ ದೊರೆ ಯಾತ್ರೆ ಹೆಸರಿನಲ್ಲಿ ಪಟ್ಟಣದ ಪ್ರಮುಖ ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸುತ್ತಿರುವುದು ಖಂಡನೀಯ. ಬೀದಿ ಬದಿ ವ್ಯಾಪಾರಸ್ಥರನ್ನು ಸುಖಾಸುಮ್ಮನೆ ಒಕ್ಕೆಲ್ಲೆಬ್ಬಿಸುತ್ತಿರುವುದು ಸರಿಯಲ್ಲ. ನಿತ್ಯ ದುಡಿದು ತಿನ್ನುವ ಶ್ರಮಿಕ ವರ್ಗದ ಮೇಲೆ ರಾಜ್ಯ ಸರ್ಕಾರ ವಿನಾಃ ಕಾರಣ ದಬ್ಬಾಳಿಕೆ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭದ್ರತೆ ಹೆಸರಿನಲ್ಲಿ ಅಧಿಕಾರಿಗಳನ್ನು ಬಳಸಿಕೊಂಡು ಕಾಂಗ್ರೆಸ್ ಮುಖಂಡರು ಸ್ವತಃ ತಾವೇ ನಿಂತು ಅಂಗಡಿಗಳನ್ನು ಮುಚ್ಚಿಸುತ್ತಿದ್ದಾರೆ ಇದಾವ ನ್ಯಾಯ ಎಂದು ನರಬೋಳಿ ಅವರು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ದೊಡ್ಡಪ್ಪಗೌಡ ನರಬೋಳಿ ಸೇರಿದಂತೆ 30 ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿ ಪೊಲೀಸ್ ವ್ಯಾನ್ ಮೂಲಕ ನೆಲೋಗಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಬಂದಿದೆ.