ಗೂಗಲ್ map ನಿಮ್ಮ location ಜತೆ ಮೊಬೈಲ್ ಬ್ಯಾಟರಿ ಸ್ಥಿತಿಯನ್ನೂ ರವಾನಿಸಲಿದೆ!
-ವಿನಯ ಮುದನೂರ್
ಅಂಗೈಯಲ್ಲೇ ಆಕಾಶ ತೋರುವ ಮಾತನ್ನು ಗೂಗಲ್ ಅಕ್ಷರಶಹ ನಿಜವಾಗಿಸಿದೆ. ಗೂಗಲ್ ಒಂದಿದ್ದರೆ ಸಾಕು ಇಡೀ ಜಗತ್ತನ್ನೇ ಅಂಗೈನಲ್ಲಿ ನೋಡಿ ಬಿಡಬಹುದು. ಪ್ರಪಂಚದ ಆಗುಹೋಗುಗಳಲ್ಲೆವನ್ನೂ ಕ್ಷಣಾರ್ಧದದಲ್ಲಿ ಗೂಗಲ್ ನಮ್ಮೆದುರಿಗಿಡುತ್ತದೆ. ಇನ್ನು ನಮಗೆ ಬೇಕಾದ ಉಪಯುಕ್ತ ಮಾಹಿತಿ ಮತ್ತು ಮಾರ್ಗದರ್ಶನದ ಜೊತೆಗೆ ನಮ್ಮ ಬಗ್ಗೆಯೂ ಮಾಹಿತಿಯನ್ನು ಬಿಚ್ಚಿಡಬಹುದಾದ ಆಯ್ಕೆಗಳನ್ನೂ ಸಹ ಗೂಗಲ್ ಒದಗಿಸಿದೆ.
ಗೂಗಲ್ ಮ್ಯಾಪ್ ಮೂಲಕ ನಾವು ತಲುಪ ಬೇಕಾದ ಮಾರ್ಗವನ್ನು ತೋರುತ್ತದೆ. ನಾವಿರುವ ಸ್ಥಳವನ್ನು ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳುವ ಆಪ್ಷನ್ನನ್ನು ಗೂಗಲ್ ಈಗಾಗಲೇ ಒದಗಿಸಿದೆ. ಇದೀಗ ಅದೇ ಮ್ಯಾಪ್ ಮೂಲಕ ನಮ್ಮ ಮೊಬೈಲ್ ಬ್ಯಾಟರಿ ಲೈಫ್ ಬಗ್ಗೆಯೂ ಮಾಹಿತಿ ರವಾನಿಸುವ ನೂತನ ಆಪ್ಷನ್ನನ್ನು ಪೂರೈಸಲು ಗೂಗಲ್ ಮುಂದಾಗಿದೆ. ಇಷ್ಟರಲ್ಲೇ ಗೂಗಲ್ ಮ್ಯಾಪ್ ಮುಖಾಂತರ ನಮ್ಮ ಮೊಬೈಲ್ ಬ್ಯಾಟರಿ ಸ್ಥಿತಿಗತಿ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಲೈವ್ ಬ್ಯಾಟರಿ ಲೈಫ್ ಸ್ಟ್ಯಾಟಿಸ್ಟಿಕ್ಸ್ ಆಯ್ಕೆ ಲಭ್ಯವಾಗಲಿದೆ ಎನ್ನಲಾಗಿದೆ.
ಪ್ರಯಾಣದ ಸಂದರ್ಭದಲ್ಲಿ ಸಕಾಲಕ್ಕೆ ಚಾರ್ಜ್ ಮಾಡಲಾಗದೆ ಮೊಬೈಲ್ ಬ್ಯಾಟರಿ ಲೋ ಆಗುವುದು ಸಹಜ. ಅಂತೆಯೇ ಅನೇಕ ಸಂದರ್ಭಗಳಲ್ಲಿ ಮೊಬೈಲ್ ಬ್ಯಾಟರಿ ಜೀವ ಕಳೆದುಕೊಂಡು ಮೊಬೈಲ್ ಸ್ವಿಚ್ ಆಫ್ ಆಗುತ್ತದೆ. ಅಂಥ ಸಂದರ್ಭದಲ್ಲಿ ಸಂಬಂಧಿಕರು ಮತ್ತು ಸ್ನೇಹಿತರು ಫೋನ್ ಮಾಡಿ ಸುಸ್ತಾಗುತ್ತಾರೆ. ಎಲ್ಲಿದ್ದಾರೋ ಏನು ಕಥೆಯೋ ಎಂಬ ಆತಂಕಕ್ಕೀಡಾಗುತ್ತಾರೆ. ಲೊಕೇಶನ್ ರವಾನೆ ಆಗಿದ್ದರೂ ಸಹ ಯಾವ ಕಾರಣಕ್ಕೆ ಫೋನ್ ಸ್ವಿಚ್ ಆಫ್ ಆಯಿತು ಎಂಬುದು ತಿಳಿಯದೇ ಚಿಂತೆ ಮೂಡುವುದು ಸಹಜ.
ಇನ್ನು ಮುಂದೆ ಅಂತ ಸಂದರ್ಭಗಳಿಗೆ ಗೂಗಲ್ ಕಡಿವಾಣ ಹಾಕಲಿದೆ. ಗೂಗಲ್ ಮ್ಯಾಪ್ ಮೂಲಕ ಲೊಕೇಶನ್ ಜೊತೆಗೆ ಮೊಬೈಲ್ ಬ್ಯಾಟರಿ ಸ್ಥಿತಿಗತಿಯ ಸಂದೇಶವನ್ನು ರವಾನಿಸಲಿದೆ. ಹೀಗಾಗಿ, ನಮ್ಮನ್ನು ಸಂಪರ್ಕಿಸುವವರಿಗೆ ನಮ್ಮ ಲೊಕೇಶನ್ ಜೊತೆಗೆ ಬ್ಯಾಟರಿ ಸ್ಥಿತಿಗತಿಯ ಮಾಹಿತಿಯನ್ನು ರವಾನಿಸಲು ಸಾಧ್ಯವಾಗಲಿದೆ. ಬ್ಯಾಟರಿ ಲೋ ಆಗಿದ್ದು ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂಬ ಮಾಹಿತಿ ಲಭ್ಯವಾಗಲಿದೆ. ಆ ಮೂಲಕ ಸಂಪರ್ಕಿಸಲು ಯತ್ನಿಸುವ ಸಂಬಂಧಿಕರು, ಸ್ನೇಹಿತರು ನೆಮ್ಮದಿಯ ನಿಟ್ಟುಸಿರು ಬಿಡಲಿದ್ದು ಮೊಬೈಲ್ ಚಾರ್ಜ್ ಆದ ಬಳಿಕ ಸಂಪರ್ಕಿಸುತ್ತಾರೆ ಎಂದು ಧೈರ್ಯವಾಗಿರಲಿದ್ದಾರೆ.