ಬೀದರ : ಬಿ.ಎಸ್.ಯಡಿಯೂರಪ್ಪ ಎದುರೇ ಬಿಜೆಪಿ-ಕೆಜೆಪಿ ಭಿನ್ನಮತ ಸ್ಪೋಟ!
ಬೀದರ: ಜಿಲ್ಲೆಯ ಔರಾದ್ ಪಟ್ಟಣದಲ್ಲಿಂದು ಬಿಜೆಪಿಯಿಂದ ನವಕರ್ನಾಟಕ ಪರಿವರ್ತನಾ ಯಾತ್ರೆ ಆಯೋಜಿಸಲಾಗಿತ್ತು. ಆದರೆ, ಪರಿವರ್ತನಾ ಯಾತ್ರೆ ಸಂದರ್ಭದಲ್ಲಿ ಶಾಸಕ ಪ್ರಭು ಚೌವಾಣ ಹಾಗೂ ಕಳೆದ ಚುನಾವಣೆಯಲ್ಲಿ ಕೆಜಿಪಿಯಿಂದ ಸ್ಪರ್ಧಿಸಿ ಸೋಲುಂಡಿದ್ದ ಬಿ.ಎಸ್.ವೈ ಆಪ್ತ ಧನಾಜೀ ಜಾಧವ್ ಮದ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಅಲ್ಲದೆ ಪರಿವರ್ತನಾ ಯಾತ್ರೆಗಾಗಿ ಇಬ್ಬರ ಬೆಂಬಲಿಗರು ಪ್ರತ್ಯೇಕ ಎರಡು ವೇದಿಕೆಗಳನ್ನು ನಿರ್ಮಿಸಿದ್ದಾರೆ.
ಪರಿವರ್ತನಾ ಯಾತ್ರೆಗೆ ಆಗಮಿಸಿದ ಬಿಜೆಪಿ ರಾಜ್ಯದ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರತ್ಯೇಕ ಎರಡು ವೇದಿಕೆಗಳನ್ನು ಕಂಡು ಗರಂ ಆಗಿದ್ದಾರೆ. ಜೊತೆಗಿದ್ದ ಸಂಸದ ಭಗವಂತ ಖೂಬಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಷ್ಟರಲ್ಲೇ ಜನಬಲ ಪ್ರದರ್ಶನಕ್ಕೆ ಮುಂದಾದ ಇಬ್ಬರು ನಾಯಕರ ಬೆಂಬಲಿಗರು ಪರ, ವಿರೋಧ ಘೋಷಣೆಗಳನ್ನು ಕೂಗಿದ್ದಾರೆ. ಅಲ್ಲದೆ ವೇದಿಕೆಗೆ ನುಗ್ಗಲು ಯತ್ನಿಸಿದ್ದಾರೆ.
ಶಾಸಕ ಪ್ರಭು ಚೌವಾಣ ಹಾಗೂ ಧನಾಜೀ ಜಾಧವ್ ಬೆಂಬಲಿಗರು ಸೃಷ್ಟಿಸಿದ ರಂಪಾಟದಿಂದಾಗಿ ಕೆಲ ಕಾಲ ವೇದಿಕೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಕಾರ್ಯರ್ತರ ರೋಷಾವೇಷವನ್ನು ತಡೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ಬಿಜೆಪಿ-ಕೆಜೆಪಿ ಎಂಬ ಬೇಧ ಬೇಡ, ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಎಲ್ಲರಿಗೂ ಸೂಕ್ತ ಸ್ಥಾನಮಾನಗಳನ್ನು ನೀಡಲಾಗುವುದು ಎಂದು ಬಿಜೆಪಿ ಬಿಜೆಪಿ ನಾಯಕರು ಮನವಿ ಮಾಡುವ ಮೂಲಕ ಕಾರ್ಯಕರ್ತರನ್ನು ಸಮಾಧಾನಗೊಳಿಸಲು ಯತ್ನಿಸಿದರು.