ಮಾಜಿ ಪುರಸಭೆ ಅಧ್ಯಕ್ಷ ಹಯ್ಯಾಳಕರ್ ಅಪಾರ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆ
ಮುಂಬರುವ ದಿನಗಳಲ್ಲಿ ಇನ್ನಷ್ಟು ಜನರು ಪಕ್ಷಕ್ಕೆ ಬರಲಿದ್ದಾರೆಃ ಶಾಸಕ ಗುರು ಪಾಟೀಲ್
ಯಾದಗಿರಿಃ ಜಿಲ್ಲೆಯ ಶಹಾಪುರ ನಗರದಲ್ಲಿ ಮಂಗಳವಾರ ನಡೆದ ಬಿಜೆಪಿ ನವ ಶಕ್ತಿ ಸಮಾವೇಶದಲ್ಲಿ ಕೋಲಿ ಸಮಾಜದ ಮುಖಂಡ ಪುರಸಭೆ ಮಾಜಿ ಅಧ್ಯಕ್ಷ ಮರೆಪ್ಪ ಹಯ್ಯಾಳಕರ್ ತಮ್ಮ ಅಪಾರ ಬೆಂಬಲಿಗರೊಂದಿಗೆ ಮಂಗಳವಾರ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಶಾಸಕ ಗುರು ಪಾಟೀಲ್ ಶಿರವಾಳ ಹಾಗೂ ಬಿಜೆಪಿ ರಾಷ್ಟ್ರನಾಯಕಿ ಪುರಂದರೇಶ್ವರಿ ಬಿಜೆಪಿ ಪಕ್ಷದ ಧ್ವಜ ನೀಡಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ನಗರದ ಯುವತಿಯರು, ವಿದ್ಯಾರ್ಥಿನಿಯರು ಸಹ ಅಪಾರ ಸಂಖ್ಯೆಯಲ್ಲಿ ಮೋದಿಜಿಯವರ ಅಭಿವೃದ್ಧಿ ಕಾರ್ಯವನ್ನು ಮೆಚ್ಚಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭ ಶಾಸಕ ಗುರು ಪಾಟೀಲ್ ಮಾತನಾಡಿ, ನಗರದ ಹಿರಿಯ ಕಾಂಗ್ರೆಸ್ ಮುಖಂಡ ಮರೆಪ್ಪ ಹಯ್ಯಾಳಕರ್ ಅವರು, ತಮ್ಮ ಅಪಾರ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆಗೊಂಡಿರುವುದು ಸಂತಸ ತಂದಿದೆ. ಪಕ್ಷಕ್ಕೆ ಇನ್ನಷ್ಟು ಶಕ್ತಿ ಬಂದಿದ್ದು, ಯುವ ಸಮೂಹ ಅವರ ನೇತೃತ್ವದಲ್ಲಿ ಕೆಲಸ ಮಾಡಬೇಕಿದೆ. ಸಂಘಟನಾತ್ಮಕವಾಗಿ ತಾಲೂಕಿನಲ್ಲಿ ಅವರು ಚಿರಪರಿಚಿತರು, ಅವರ ನಾಯಕತ್ವದಿಂದ ನಮ್ಮ ಪಕ್ಷಕ್ಕೆ ಇನ್ನಷ್ಟು ಶಕ್ತಿ ಬಂದಿದೆ. ಮುಂಬರುವ ದಿನಗಳಲ್ಲಿ ಪಕ್ಷಕ್ಕೆ ಬರುವವರ ಸಂಖ್ಯೆ ಜಾಸ್ತಿ ಇದೆ. ಉದ್ದನೇಯ ಲಿಸ್ಟ್ ಇದೆ ಎಂದರು.
ಎಲ್ಲರೂ ಉತ್ಸಾಹದಿಂದ ಕೆಲಸ ಮಾಡಬೇಕು. ಮತದಾರರಲ್ಲಿ ಕೇಂದ್ರ ಸರ್ಕಾರದ ಸಾಧನೆ, ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದರು.
ಶಾಸಕ ಗುರು ಪಾಟೀಲರ ಅಭಿವೃದ್ಧಿ ಕಾರ್ಯ, ಕ್ಷೇತ್ರದ ಬಗ್ಗೆ ಅವರಿಗಿದ್ದ ಕಾಳಜಿ, ಹಾಗೂ ಪ್ರಧಾನಿ ಮೋದಿಜೀಯವರ ಅಭಿವೃದ್ಧಿ ಮಂತ್ರ ಮತ್ತು ಅವರ ಕಾರ್ಯವೈಖರಿ, ದೇಶ ಅಭಿವೃದ್ಧಿ ಬಗ್ಗೆ ಅವರ ದೂರ ದೃಷ್ಟಿ, ದಿನದ 24 ತಾಸು ಅವರ ದುಡಿಮೆ ಕಂಡು ನಾನು ಬೆಂಬಲಿಸುವದಾದರೆ ಬಿಜೆಪಿಯೇ ಬೆಂಬಲಿಸಬೇಕೆಂಬ ನನ್ನ ಹಂಬಲ. ನಾನು ಉತ್ತಮವಾಗಿ ಕಾರ್ಯನಿರ್ವಹಿಸುವವರಿಗೆ ಬೆಂಬಲಿಸಬೇಕು ಎಂಬ ದೃಢ ನಿರ್ಧಾರದಿಂದ ನಾನು ಇಂದು ಬಿಜೆಪಿ ಸೇರ್ಪಡೆಗೊಂಡಿದ್ದೇನೆ.
–ಮರೆಪ್ಪ ಹಯ್ಯಾಳಕರ್. ಮಾಜಿ ಪುರಸಭೆ ಅಧ್ಯಕ್ಷ. ಶಹಾಪುರ.