ಸೈಟು ಒತ್ತೆಯಿಟ್ಟು ಸಾಲ ಪಡೆದ ಕಾಂಗ್ರೆಸ್ ಬಿಎಸ್ ವೈ ಆರೋಪ
ಬಿಜೆಪಿ ಪರಿವರ್ತನಾ ಯಾತ್ರೆಗೆ ಅದ್ದೂರಿ ಸ್ವಾಗತ
ಯಾದಗಿರಿಃ ಸರ್ವರಿಗೂ ಸಮಬಾಳು ಸಮಪಾಲು ಘೋಷಣೆಯೊಂದಿಗೆ ರೈತರ ಹೆಸರಿನಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ ನಾನು, ರೈತರಿಗಾಗಿ ರಾಜ್ಯದ ಹಿಂದುಳಿದ ದೀನ ದಲಿತರ ಅಭಿವೃದ್ಧಿಗಾಗಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದೆ, ಆದರೆ ಇಂದು ಕಾಂಗ್ರೆಸ್ ಸರ್ಕಾರ ಅವುಗಳನ್ನು ಕಡೆಗಣಿಸುವ ಮೂಲಕ ನಾಗರಿಕರಿಗೆ ದೊರೆಯುವ ಸೌಲಭ್ಯ ವಂಚಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ನಗರದಲ್ಲಿ ನಡೆದ ಪರಿವರ್ತನಾ ಯಾತ್ರೆ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿಯೇ ಅತಿ ಹೆಚ್ಚು ರೈತರು ಕರ್ನಾಟಕ ರಾಜ್ಯದಲ್ಲಿ ಜೀವಕಳೆದುಕೊಂಡಿದ್ದಾರೆ. ರೈತರಿಗೆ ಸಮರ್ಪಕ ವ್ಯವಸ್ಥೆ ಒದಗಿಸಲು ಆಗದೆ, ಸಿದ್ರಾಮಯ್ಯ ಸರ್ಕಾರ ನಿದ್ರೆಗೆ ಜಾರಿದೆ. ರೈತರು ಬೆಳೆದ ಬೆಳೆಗೆ ಸೂಕ್ತ ಬೆಂಬಲ ಬೆಲೆ ಸಿಗದೆ ನೂರಾರು ಜನ ರೈತರು ಸಾವಿಗೀಡಾಗಿದ್ದಾರೆ. ರೈತ ಬೆಳೆದ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಬೇಕಿದೆ.
ಅಲ್ಲದೆ ಸಿದ್ರಾಮಯ್ಯನವರ ಸರ್ಕಾರ ಸಾಲದ ಸರ್ಕಾರವಾಗಿದೆ. ಬೆಂಗಳೂರಿನಲ್ಲಿರುವ ಸೈಟ್‍ಗಳನ್ನು ಒತ್ತೆಯಾಗಿಟ್ಟು ಸರ್ಕಾರ ಸಾಲ ಪಡೆಯುತ್ತಿದೆ ಎಂದು ಆರೋಪಿಸಿದ ಅವರು, ಇನ್ನೆಷ್ಟು ದಿನಗಳವರೆಗೆ ಸಾಲದ ಮೇಲೆ ಸರ್ಕಾರ ನಡೆಸಲು ಸಾಧ್ಯ. ಸಿದ್ರಾಮಯ್ಯನವರ ಕೊನೆಗಳಿಗೆಯಲ್ಲಿ ನಾನೇನು ಜಾಸ್ತಿ ಹೇಳಲು ಬಯಸುವದಿಲ್ಲ.
ರಾಜ್ಯದ ಬಹುಕೋಟಿ ಅನುದಾನದ ಕಾಮಗಾರಿಗಳನ್ನು ತಮಗೆ ಬೇಕಾದ ಗುತ್ತಿಗೆದಾರರಿಗೆ ಹಂಚಿಕೆ ಮಾಡಿ ಕಮಿಷನ್ ಪಡೆಯುವ ಮೂಲಕ ಕಮಿಷನ್ ಏಜಂಟರಂತೆ ಕೆಲಸ ಮಾಡುತ್ತಿದೆ ಎಂದು ದೂರಿದರು .