ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದ ಕೆರೆಯಂತಾದ ಬಸವೇಶ್ವರ ವೃತ್ತ
ಶಹಾಪುರದಲ್ಲಿ ಮಳೆಃ ನಗರದ ಬಸವೇಶ್ವರ ವೃತ್ತದ ತುಂಬಾ ನೀರೋನೀರು
ಯಾದಗಿರಿ,ಶಹಾಪುರ: ಭಾನುವಾರ ಸಂಜೆ ಸುರಿದ ಮಳೆಯಿಂದ ನೀರು ಸರಾಗವಾಗಿ ಸಾಗದೆ ರಸ್ತೆ ಮೇಲೆ ಸಂಗ್ರಹಗೊಂಡ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಬೇಸಿಗೆ ಕಾಲವಾಗಿದ್ದರಿಂದ ಚರಂಡಿಯಲ್ಲಿ ತ್ಯಾಜ್ಯ ವಸ್ತು ಸಂಗ್ರಹವಾಗಿದ್ದು, ಅಲ್ಲದೆ ಚರಂಡಿಗೆ ಹೊಂದಿಕೊಂಡಿರುವ ಅಂಗಡಿ ಮುಗ್ಗಟ್ಟಿನವರು ಪ್ಲಾಸ್ಟಿಕ್ ಹಾಗೂ ಇತರ ವಸ್ತುಗಳು ಚರಂಡಿಯಲ್ಲಿ ಎಸೆದ ಪರಿಣಾಮ ಮಳೆಯ ನೀರು ಚರಂಡಿಗೆ ಸಾಗದೆ ರಸ್ತೆಯನ್ನು ಆಕ್ರಮಿಸಿಕೊಂಡಿದೆ.
ನಗರದ ಮೋಚಿಗಡ್ಡೆಯಿಂದ ಬಸವೇಶ್ವರ ವೃತ್ತದ ಮೂಲಕ ಹಾಯ್ದು ಹಳ್ಳವನ್ನು ಸೇರುವ ಚರಂಡಿ ಇದಾಗಿದ್ದು, ಅದರಲ್ಲಿ ತುಸು ಮಳೆಯಾದರೆ ಸಾಕು ಚರಂಡಿ ಹಾಗೂ ಮಳೆ ನೀರು ಸಂಗ್ರಹವಾಗಿ ಬಸವೇಶ್ವರ ವೃತ್ತವನ್ನು ಆವರಿಸಿಕೊಳ್ಳುತ್ತದೆ. ಇದರಿಂದ ವಾಹನ ಸವಾರರು, ಪಾದಚಾರಿಗಳು. ರಸ್ತೆಗೆ ಹೊಂದಿಕೊಂಡಿರುವ ಅಂಗಡಿಯವರು ಚರಂಡಿ ನೀರಿನಲ್ಲಿಯೇ ನಡೆದಾಡುವ ದುಸ್ಥಿತಿ ಮುಂದುವರೆದಿದೆ.
ಅವೈಜ್ಞಾನಿಕ ಚರಂಡಿ ವ್ಯವಸ್ಥೆಯಿಂದ ಮಳೆಗಾಲದಲ್ಲಿ ಈ ಸಮಸ್ಯೆ ಉಂಟಾಗುತ್ತಿದೆ ಎಂದು ನಾಗರಿಕರು ಆರೋಪಿಸಿದ್ದಾರೆ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ಚರಂಡಿ ಕಾರ್ಯ ಸುಗಮ ನೀರು ಹೋಗುವಂತೆ ಮಾಡಬೇಕಿದೆ. ಅಲ್ಲದೆ ಚರಂಡಿಯಲ್ಲಿ ಬಿದ್ದ ತ್ಯಾಜ್ಯ ವಿಲೇವಾರಿ ಮಾಡಬೇಕಿದೆ. ಮಳೆಗಾಲ ಆರಂಭಕ್ಕೂ ಮುನ್ನವೇ ನಗರದ ದೊಡ್ಡ ದೊಡ್ಡ ಚರಂಡಿಗಳನ್ನು ಸ್ವಚ್ಛಗೊಳಿಸಬೇಕಿತ್ತು. ಈಗ ಮಳೆಗಾಲ ಆರಂಭವಾಗಿದೆ. ತುಸು ಮಳೆಯಾದರೆ ಸಾಕು ನಗರದ ಮುಖ್ಯ ರಸ್ತೆ ಬಸವೇಶ್ವರ ಸರ್ಕಲ್ ಸುತ್ತಲೂ ಕೆರೆ ಅಂಗಳದಂತೆ ಕಂಗೊಳಿಸುತ್ತಿದೆ. ಹೊಲಸು ನೀರಿನಲ್ಲಿಯೇ ಜನ ಸಂಚಾರ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಕೂಡಲೇ ಹೂಳು ಹಾಗೂ ತ್ಯಾಜ್ಯ ವಸ್ತುಗಳನ್ನು ತುಂಬಿಕೊಂಡಿರುವ ಚರಂಡಿಯನ್ನು ಸ್ವಚ್ಛಗೊಳಿಸಬೇಕು. ಚರಂಡಿಯಲ್ಲಿ ಮಳೆ ನೀರು ಹಾಗೂ ಚರಂಡಿ ನೀರು ಸರಾಗವಾಗಿ ಸಾಗುವಂತೆ ವ್ಯವಸ್ಥೆ ಮಾಡಬೇಕು ಎಂದು ನಗರಸಭೆಯ ಸಿಬ್ಬಂದಿಗೆ ನಗರದ ಜನತೆ ಮನವಿ ಮಾಡಿದ್ದಾರೆ.




