ಕೋಟೆನಾಡಿನ ಮೇಲೆ ಕಮಲ ಪಡೆ ಕಣ್ಣು : ‘ನಾಯಕ’ ಮತ ಸೆಳೆಯಲು ಶ್ರೀರಾಮುಲು ‘ಗನ್ನು’!
-ಮಲ್ಲಿಕಾರ್ಜುನ ಮುದನೂರ್
ಚಿತ್ರದುರ್ಗ : ಮದ್ಯ ಕರ್ನಾಟಕದ ಪ್ರಮುಖ ಜಿಲ್ಲೆಯಾದ ಚಿತ್ರದುರ್ಗ ಗೆಲ್ಲಲು ಬಿಜೆಪಿ ನಾಯಕರು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ನಾಯಕ ಸಮುದಾಯದ ಮತ ಸೆಳೆಯಲು ತಂತ್ರ ರೂಪಿಸಿದ್ದಾರೆ. ಪರಿಣಾಮ ಮಾರ್ಚ್ 11ರಂದು ಚಿತ್ರದುರ್ಗದಲ್ಲಿ ಬಿಜೆಪಿಯಿಂದ ಎಸ್ಟಿ ಸಮಾವೇಶಕ್ಕೆ ಸಿದ್ಧತೆ ನಡೆದಿದೆ. ಬಿಜೆಪಿ ಎಸ್ಟಿ ಮೋರ್ಚಾದ ರಾಜ್ಯದ್ಯಕ್ಷ, ಮಾಜಿ ಸಚಿವ ರಾಜೂಗೌಡ ಹಾಗೂ ಬಳ್ಳಾರಿ ಸಂಸದ ಶ್ರೀರಾಮುಲು ನೇತೃತ್ವದಲ್ಲಿ ನಾಯಕ ಸಮುದಾಯದ ಮತಗಳಿಗೆ ಗಾಳ ಹಾಕಲು ಕೇಸರಿ ಪಡೆ ಸ್ಕೆಚ್ ಹಾಕಿದೆ.
ಮಾರ್ಚ್ 11ರಂದು ನಡೆಯಲಿರುವ ಬೃಹತ್ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅಥವಾ ಬಿಜೆಪಿ ರಾಷ್ಟ್ರೀಯ ಅದ್ಯಕ್ಷ ಅಮಿತ್ ಶಾ ಅವರಿಂದ ಚಾಲನೆ ಕೊಡಿಸುವ ಚಿಂತನೆ ನಡೆದಿದೆ. ನಾಯಕ ಸಮುದಾಯದ ಪ್ರಭಾವಿ ಲೀಡರ್ ಆಗಿರುವ ಶ್ರೀರಾಮುಲು ಚಿತ್ರದುರ್ಗ, ಬಳ್ಳಾರಿ ರಾಯಚೂರು, ಗದಗ, ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ತಮ್ಮದೇ ಆದ ವರ್ಚಸ್ಸನ್ನು ಹೊಂದಿದ್ದಾರೆ. ನಾಯಕ ಸಮುದಾಯದ ಯುವ ಸಮೂಹವನ್ನು ಸೆಳೆಯುವ ತಾಕತ್ತು ಶ್ರೀರಾಮುಲುಗೆ ಇದೆ ಎಂಬುದು ಬಿಜೆಪಿ ಹೈಕಮಾಂಡ್ ಗೆ ಚನ್ನಾಗಿಯೇ ಗೊತ್ತು.
ಸಮಾವೇಶದ ಸಂದರ್ಭದಲ್ಲಿ ಸಂಸದ ಶ್ರೀರಾಮುಲು ಒಂದು ವಾರಕಾಲ ಚಿತ್ರದುರ್ಗ ಟೂ ಬಳ್ಳಾರಿ ಓಡಾಡಿದರೂ ಸಾಕು ನಾಯಕ ಸಮುದಾಯದ ಮತಗಳು ಕಮಲದ ಬುಟ್ಟಿಗೆ ಬೀಳುವುದು ಪಕ್ಕಾ. ಹೀಗಾಗಿ, ಶ್ರೀರಾಮುಲು ವರ್ಚಸ್ಸು ಬಳಸಿಕೊಂಡು ನಾಯಕ ಸಮುದಾಯದ ಮತಬ್ಯಾಂಕಿಗೆ ಲಗ್ಗೆಯಿಡಲು ಬಿಜೆಪಿ ಮುಂದಾಗಿದೆ. ಸಂಸದ ಶ್ರೀರಾಮುಲು, ಮಾಜಿ ಸಚಿವ ರಾಜೂಗೌಡರ ಹವಾದ ಜೊತೆಗೆ ಬೃಹತ್ ಸಮಾವೇಶ, ಪ್ರಧಾನಿ ಮೋದಿ ಅಥವಾ ಬಿಜೆಪಿ ರಾಷ್ಟ್ರೀಯ ಅದ್ಯಕ್ಷ ಅಮಿತ್ ಶಾ ಆಗಮನ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತುಂಬಲಿದೆ. ಆ ಮೂಲಕ ಮದ್ಯ ಕರ್ನಾಟಕದ ಚಿತ್ರದುರ್ಗದಲ್ಲಿ ಬಿಜೆಪಿ ಹವಾ ಸೃಷ್ಠಿಯಾದರೆ ಅರ್ಧ ರಾಜ್ಯ ಗೆದ್ದಂತೆ ಎಂಬುದು ಕೇಸರಿ ನಾಯಕರ ಲೆಕ್ಕಾಚಾರ.
ಒಂದು ಕಡೆ ಕೈಪಡೆ ಎಐಸಿಸಿ ಅದ್ಯಕ್ಷ ರಾಹುಲ್ ಗಾಂಧಿ ಅವರನ್ನು ಕರೆಸಿ ಟೆಂಪಲ್ ರನ್ ಮೊರೆ ಹೋಗಿದ್ದು, ಹೈವೇ ಬಳಿ ಹೋಟೆಲ್ ನಲ್ಲಿ ಮಿರ್ಚಿ ಮಂಡಕ್ಕಿ ತಿಂದು ಚಹಾ ಕುಡಿದದ್ದು, ವಿವಿದ ಸಮುದಾಯಗಳ ಜೊತೆ ಸಂವಾದ ನಡೆಸಿದ್ದು ಹೊಸ ಹವಾ ಕ್ರಿಯೇಟ್ ಮಾಡಿದೆ. ಮತ್ತೊಂದು ಕಡೆ ಕೈ ಪಡೆಗೆ ಟಾಂಗ್ ಕೊಡಲು ಬಿಜೆಪಿ ತನ್ನದೇ ಆದ ಸ್ಟ್ಯಾಟಜಿಯಲ್ಲಿ ತೊಡಗಿದೆ. ಆದರೆ, ಮತದಾರ ಪ್ರಭು ಯಾರ ತಂತ್ರಗಾರಿಕೆಗೆ ಮರಳಾಗುತ್ತಾನೆಂಬುದನ್ನು ಕಾದು ನೋಡಬೇಕಿದೆ.