14ಜನರಿದ್ದ 2ಹಡಗು ಸಮುದ್ರ ಪಾಲು: ನಿನ್ನೆ 6ಜನರ ರಕ್ಷಣೆ, ಇಂದು 8ಜನರ ರಕ್ಷಣಾ ಕಾರ್ಯ ಶುರು
ಬಂಗಾಲಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಉಂಟಾಗಿರುವ ಓಖಿ ಚಂಡಮಾರುತದಿಂದಾಗಿ ಲಕ್ಷದ್ವೀಪ ಸಮೀಪದ ಕವರತಿ ಬಳಿ ಸಮುದ್ರದಲ್ಲಿ ಭಾರೀ ಅಲೆಗಳು ಎದ್ದಿದ್ದು ಎರಡು ಹಡಗುಗಳು ಮುಳುಗಡೆ ಆಗಿರುವ ಘಟನೆ ನಡೆದಿದೆ. ದಿನಸಿ, ತರಕಾರಿ ಮತ್ತಿತರೆ ಸಾಮಗ್ರಿಗಳನ್ನು ಹೊತ್ತು ನವೆಂಬರ 29ರಂದು ಮಂಗಳೂರಿನಿಂದ ಲಕ್ಷದ್ವೀಪದತ್ತ ಹೊರಟಿದ್ದ ಮಂಗಳೂರು ಹಾಗೂ ತಮಿಳುನಾಡು ಮೂಲದ ಎರಡು ಹಡಗುಗಳು ಸಮುದ್ರದಲ್ಲಿ ಮುಳುಗಿದ ಘಟನೆ ನಿನ್ನೆ ನಡೆದಿದೆ.
ಎರಡು ಹಡಗುಗಳಲ್ಲಿ ಒಟ್ಟು 14ಜನರಿದ್ದರು. ಹೀಗಾಗಿ, ಮುಂಬೈ ನೌಕಾ ನೆಲೆಯ ಸಿಬ್ಬಂದಿ ಹೆಲಿಕಾಪ್ಟರ್ ಮೂಲಕ ಜನರ ರಕ್ಷಣಾ ಕಾರ್ಯ ಆರಂಭಿಸಿತ್ತು. ಹಡಗಿನಲ್ಲಿದ್ದ 6ಜನರನ್ನು ರಕ್ಷಿಸಲಾಗಿತ್ತು. ಬಳಿಕ ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್ ಸಂಚಾರಕ್ಕೂ ಅಡಚಣೆಯಾಗಿದ್ದು ಮಧ್ಯರಾತ್ರಿ ವೇಳೆ ರಕ್ಷಣಾ ಕಾರ್ಯ ಸ್ಥಗಿತಗೊಳಿಸಲಾಗಿತ್ತು. ಪರಿಣಾಮ ಹಡುಗುಗಳು ಮತ್ತಷಾಪಾಯಕ್ಕೆ ಸಿಲುಕಿದ್ದು ಇನ್ನುಳಿದ 8ಜನ ಜೀವ ಭಯದಲ್ಲಿದ್ದಾರೆ. ಇಂದು ಬೆಳಗಿನ ಜಾವ 5ಗಂಟೆಯಿಂದ ಸ್ಥಳೀಯ ಮೀನುಗಾರರ ಸಹಾಯದಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ಅವರೆಲ್ಲರೂ ಸಹ ಸುರಕ್ಷಿತವಾಗಿ ದಡ ಸೇರಲಿ ಎಂಬುದು ವಿನಯವಾಣಿ ಆಶಯ.