ಪ್ರಮುಖ ಸುದ್ದಿ
ಬಾಲಕನ ಭೀಕರ ಹತ್ಯೆ : ಹಂತಕರಿಗಾಗಿ ಪೊಲೀಸರ ಹುಡುಕಾಟ!
ಕಲಬುರಗಿ: ಬಾಲಕನ ತಲೆ ಮೇಲೆ ಕಲ್ಲು ಹಾಕಿದ್ದಲ್ಲದೆ ಮಾರಕಾಸ್ತ್ರಗಳಿಂದ ಇರಿದು 13 ವರ್ಷದ ಬಾಲಕನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಜಿಲ್ಲೆ ಅಫಜಲಪುರ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಪಟ್ಟಣದ ನಿವಾಸಿಯಾದ ಹರೀಶ್ (13) ಕೊಲೆಯಾದ ದುರ್ದೈವಿ ಎಂದು ಗುರುತಿಸಲಾಗಿದೆ. ಬಾಲಕನನ್ನು ಕೊಂದು ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದು ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಅಫಜಲಪುರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ಪ್ರಕರಣ ಬೇಧಿಸಲು ಜಾಲ ಬೀಸಿದ್ದಾರೆ.
ಬಾಲಕನನ್ನು ಭೀಕರ ಹತ್ಯೆ ಮಾಡಿರುವ ಸುದ್ದಿ ಎಲ್ಲೆಡೆ ಕಾಳ್ಗಿಚ್ಚಿನಂತೆ ಹಬ್ಬಿದೆ. ಪರಿಣಾಮ ಘಟನಾ ಸ್ಥಳದಲ್ಲಿ ಸಾವಿರಾರು ಜನ ಜಮಾಯಿಸಿದ್ದಾರೆ. ಬಾಲಕನ ಹತ್ಯೆ ಕಂಡು ಇಡೀ ಪಟ್ಟಣದ ಜನ ಬೆಚ್ಚಿಬಿದ್ದಿದ್ದಾರೆ. ಬಾಲಕನ ಕೊಲೆ ಪ್ರಕರಣಕ್ಕೆ ರೆಕ್ಕೆ ಪುಕ್ಕ ಕಟ್ಟಿ ಜನ ನಾನಾ ಮಾತುಗಳಲ್ಲಿ ತೊಡಗಿದ್ದಾರೆ. ಹೀಗಾಗಿ, ಪೊಲೀಸರು ಶೀಘ್ರಗತಿಯಲ್ಲಿ ಕೊಲೆಗಡುಕರನ್ನು ಪತ್ತೆ ಹಚ್ಚಿ ತಕ್ಕ ಶಿಕ್ಷೆ ವಿಧಿಸಬೇಕಿದೆ.