ಮುಂದಿನ ಮುಖ್ಯಮಂತ್ರಿ ಯಾರು? ಬ್ರಹ್ಮಾಂಡ ಗುರೂಜಿ ನುಡಿದ ಭವಿಷ್ಯವೇನು?
ಹೆಚ್.ಡಿ.ಕುಮಾರಸ್ವಾಮಿ ಆಗ್ತಾರಂತೆ ಮತ್ತೆ ಮುಖ್ಯಮಂತ್ರಿ!
ಹಾಸನ: ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯದ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಆಗುವ ಯೋಗವಿದೆ. ಆದರೆ, ಅವರು ಅವರ ತಂದೆ ಹೆಚ್.ಡಿ.ದೇವೇಗೌಡರ ಮಾತನ್ನು ಕೇಳಬೇಕು. ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಜನ ಕುಮಾರಸ್ವಾಮಿ ಅವರ ಮೇಲೆ ನಂಬಿಕೆ ಮತ್ತು ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂದು ಹಾಸನದಲ್ಲಿ ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮಾ ಹೇಳಿದ್ದಾರೆ.
ಹಾಸನಾಂಬೆ ದೇಗುಲಕ್ಕೆ ಇಂದು ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮಾ ಭೇಟಿ ನೀಡಿದ್ದರು. ದೇವಿಯ ವಿಶೇಷ ದರ್ಶನ ಪಡೆದ ಬಳಿಕ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ವರ್ಷ ಗಂಡಾಂತರ ಕಾದಿದೆ ಎಂದು ಭವಿಷ್ಯ ನುಡಿದ ಅವರು ವೃಶ್ಚಿಕ ರಾಶಿಯಲ್ಲಿ ದೋಷವಿದೆ. ದೋಷ ಪರಿಹಾರಕ್ಕಾಗಿ ಅವರು ದೇವರ ಮೊರೆ ಹೋಗಬೇಕಿದೆ. ಆ ಮೂಲಕ ಗಂಡಾಂತರವನ್ನು ತಪ್ಪಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಇನ್ನು ಭವಿಷ್ಯ ನಂಬುವವರು ಮತ್ತು ಬ್ರಹ್ಮಾಂಡ ಗುರೂಜಿ ಮೇಲೆ ನಂಬಿಕೆ ಇಟ್ಟವರು ಈ ಭವಿಷ್ಯ ನಿಜವಾಗುತ್ತದೆ ಎನ್ನುತ್ತಿದ್ದಾರೆ. ಆದರೆ, ಬ್ರಹ್ಮಾಂಡ ಗುರೂಜಿಯ ಭವಿಷ್ಯವನ್ನು ಗೇಲಿ ಮಾಡುವ ವರ್ಗ ಮಾತ್ರ ಇದೆಲ್ಲಾ ಬರೀ ಬೊಗಳೆ ಅಂತ ಮೂಗು ಮುರಿಯುತ್ತಿದೆ. ಹೀಗಾಗಿ, ಬ್ರಹ್ಮಾಂಡ ಗುರೂಜಿ ನರೇಂದ್ರ ಶರ್ಮಾ ಅವರ ಭವಿಷ್ಯ ಎಷ್ಟರ ಮಟ್ಟಿಗೆ ನಿಜವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.