ಬಾಬ್ರಿ ಮಸೀದಿ ಧ್ವಂಸ ದಿನಃ ಕರಾಳದಿನ, ಶೌರ್ಯಾಚರಣೆಗೆ ಬ್ರೇಕ್.!
ಶೌರ್ಯ ಮತ್ತು ಕರಾಳ ದಿನಾಚರಣೆಃ ಪೊಲೀಸರಿಂದ ನಿರಾಕರಣೆ
ಧಾರವಾಡಃ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಇಂದಿಗೆ 25 ವರ್ಷಗಳು ತುಂಬಿವೆ. ಹೀಗಾಗಿ ಪರ ಮತ್ತು ವಿರೋಧಿ ದಿನಾಚರಣೆ ಆಚರಿಸಲು ಮುಂದಾಗಿದ್ದ ವಿವಿಧ ಸಂಘಟನೆಗಳ ಕಾರ್ಯಕರ್ತರಿಗೆ ಪೊಲೀಸರು ಬ್ರೇಕ್ ಹಾಕಿದ್ದಾರೆ.
ನಗರದ ವಿವೇಕಾನಂದ ವೃತ್ತದಲ್ಲಿ ಕರಾಳ ದಿನಾಚರಣೆಗೆ ಮುಂದಾದ ಎಸ್‍ಯುಸಿಐ ಸಂಘಟನೆ ಕಾರ್ಯಕರ್ತರಿಗೆ ಕರಾಳ ದಿನಾಚರಣೆ ಆಚರಿಸದಿರಲು ಪೊಲೀಸರು ಸೂಚನೆ ನೀಡಿ ಮರಳಿ ಕಳುಹಿಸಿದ್ದಲ್ಲದೆ ಪ್ರತಿಭಟನೆ ಮಾಡದಂತೆ ಸೂಚನೆ ನೀಡಿದ್ದಾರೆ.
ಅದೇ ವೇಳೆಗೆ ಅದೇ ವೃತ್ತಕ್ಕೆ ಆಗಮಿಸಿದ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಶೌರ್ಯ ದಿನಾಚರಣೆ ಆಚರಿಸಲು ಮುಂದಾದಾಗ ಹಿರಿಯ ಪೊಲೀಸ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಶೌರ್ಯ ದಿನಾಚರಣೆ ಆಚರಿಸಲು ಅವಕಾಶ ನೀಡದೆ ವಾಪಾಸ್ ಕಳುಹಿಸಿದರು.
ನಗರ ಠಾಣೆ ಪೊಲೀಸರು ಶೌರ್ಯ ದಿನಾಚರಣೆ ಮತ್ತು ಕರಾಳ ದಿನಾಚರಣೆ ಎರಡಕ್ಕೂ ಅವಕಾಶ ನೀಡದೆ ತಡೆದಿದ್ದಾರೆ. ಈ ಸಂದರ್ಭದಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಸ್ಥಳಕ್ಕೆ ಆಗಮಿಸಿದ ಬಿಜೆಪಿ ಮುಖಂಡರು ತಮ್ಮನ್ನು ಬಂಧಿಸುವಂತೆ ಪಟ್ಟು ಹಿಡಿದ ಘಟನೆಯೂ ನಡೆದಿದೆ.